

ವಿಜಯವಾಣಿ ಸುದ್ದಿಜಾಲ ಉಡುಪಿ
ಭಗವಾನ್ ಶ್ರೀರಾಮಚಂದ್ರನು ಧರ್ಮದ ಪ್ರತಿರೂಪ. ರಾಮಾಯಣವು ಶ್ರೀರಾಮನ ಆದರ್ಶಗಳನ್ನು ಸಾರುವ ಗ್ರಂಥವಾಗಿದ್ದು, ಜಗತ್ತಿನ ಮನ ಗೆದ್ದ ಮಹಾ ಕಾವ್ಯವಾಗಿದೆ. ಅಂತಹ ವಿಶ್ವ ಶ್ರೇಷ್ಠ ಕಾವ್ಯ ರಚಿಸಿರುವ ವಾಲ್ಮೀಕಿ ಮಹರ್ಷಿಗಳ ಜೀವನವೇ ಪ್ರೇರಣಾದಾಯಕವಾಗಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ಅಭಿಪ್ರಾಯಪಟ್ಟರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ನಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಸಂಘಟನೆಯ ಆಶ್ರಯದಲ್ಲಿ ಮಂಗಳವಾರ (ಅ.7) ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಕಳದ ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರಕಾಶ ನಾಯ್ಕ ಮಹರ್ಷಿ ವಾಲ್ಮೀಕಿ ಜೀವನ ವೃತ್ತಾಂತ ಕುರಿತು ಉಪನ್ಯಾಸ ನೀಡಿದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಹಾಗೂ ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಇಲಾಖಾ ಅಧಿಕಾರಿಗಳು, ಪರಿಶಿಷ್ಟ ವರ್ಗಗಳ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು. ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ನಾರಾಯಣಸ್ವಾಮಿ ಎಂ. ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ರಾಮಾಯಣ ರಚಿಸಿದ ವಾಲ್ಮೀಕಿಯ ಆಚಾರ-ವಿಚಾರಗಳನ್ನು ಇಂದಿನ ಯುವಜನತೆಗೆ ತಿಳಿಸಿಕೊಡುವ ಅಗತ್ಯತೆಯಿದೆ. ಅವರ ಹೆಸರಿನಲ್ಲಿ ಜಾರಿಯಾಗಿರುವ ಸರ್ಕಾರಿ ಯೋಜನೆಗಳನ್ನು ಅರ್ಹರ ಮನೆ ಬಾಗಿಲಿಗೆ ತಲುಪಿಸಿ ಸಮಾಜದ ಉನ್ನತಿಯಾದಾಗ ವಾಲ್ಮೀಕಿ ಜಯಂತಿ ಆಚರಣೆಯೂ ಅರ್ಥಪೂರ್ಣವಾಗುತ್ತದೆ. | ಯಶ್ಪಾಲ್ ಸುವರ್ಣ. ಉಡುಪಿ ಶಾಸಕ