ಗ್ರಾಮವಾರು ಅನಕ್ಷರಸ್ಥರನ್ನು ಗುರುತಿಸಿ, ಸಾಕ್ಷರತೆ ಕೊಡಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

District Level Literacy Program Implementation Committee Meeting
Published on

ಮಂಡ್ಯ: ಜಿಲ್ಲೆಯಲ್ಲಿ ಗ್ರಾಮವಾರು ಅನಕ್ಷರಸ್ಥರನ್ನು ಗುರುತಿಸಿ ಸಾಕ್ಷರತಾ ಕಾರ್ಯಕ್ರಮ ಹಮ್ಮಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಸಾಕ್ಷರತಾ ಕಾರ್ಯಕ್ರಮ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮವಾರು ಅನಕ್ಷರಸ್ಥರಿಗೆ ಪಾಠ ಮಾಡಲು ಅದೇ ಗ್ರಾಮದಲ್ಲಿ ಆಸಕ್ತಿ ಇರುವ ಪದವಿ ಅಥವಾ ಉತ್ತಮ ವಿದ್ಯಾರ್ಹತೆ ಹೊಂದಿರುವವರನ್ನು ಗುರುತಿಸಿ ಕಾರ್ಯಕ್ರಮ ಅನುಷ್ಠಾನ ಮಾಡಿ. ಪಾಠ ಮಾಡಿದ ವ್ಯಕ್ತಿಗೆ ಪ್ರಶಂಸನಾ ಪತ್ರ ನೀಡುವ ವ್ಯವಸ್ಥೆ ಮಾಡಿ ಎಂದು ಹೇಳಿದರು.

ಪಾಠವನ್ನು ರಾತ್ರಿ ವೇಳೆ ಶಾಲೆಗಳಲ್ಲಿ ನಡೆಸಬೇಕಿರುವುದರಿಂದ ಶಿಕ್ಷಣ ಇಲಾಖೆಯ ಸಹಕಾರ ಪಡೆದುಕೊಳ್ಳುವುದರ ಜತೆಗೆ ಮುಖ್ಯೋಪಾಧ್ಯಾಯರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿಕೊಳ್ಳಿ. ಕಡಿಮೆ ಅನಕ್ಷರಸ್ಥರಿರುವ ಗ್ರಾಮಗಳನ್ನು ಮೊದಲು ಗುರುತಿಸಿ ಸಾಕ್ಷರತಾ ಕಾರ್ಯಕ್ರಮವನ್ನು ಅನುಷ್ಠಾನ ಮಾಡಿ ಸಂಪೂರ್ಣ ಸಾಕ್ಷರತಾ ಗ್ರಾಮ ಎಂದು ಘೋಷಿಸಬಹುದು. ಇದೇ ರೀತಿ ಹೆಚ್ಚು ಅನಕ್ಷರಸ್ಥ ಇರುವ ಗ್ರಾಮಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ಎಂದು ಸಲಹೆ ನೀಡಿದರು.

2011ರ ಜನಗಣತಿ ಹಾಗೂ 2018ರ ಸಾಮಾಜಿಕ ಆರ್ಥಿಕ ಗಣತಿಯಲ್ಲಿ ಗ್ರಾಮವಾರು ಇರುವ ಅನಕ್ಷರಸ್ಥರ ಮಾಹಿತಿ ದೊರೆಯುತ್ತದೆ. ಸಾಕ್ಷರತಾ ಕಾರ್ಯಕ್ರಮ ಹಮ್ಮಿಕೊಳ್ಳಲು ಗ್ರಾಮವಾರು ನಿಖರ ಮಾಹಿತಿ ಇರಬೇಕು. ಆಗ ಮಾತ್ರ ಸಾಕ್ಷರತಾ ಕಾರ್ಯಕ್ರಮವನ್ನು ಉತ್ತಮವಾಗಿ ಅನುಷ್ಠಾನ ಮಾಡಲು ಸಾಧ್ಯ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ರಾಮಲಿಂಗಯ್ಯ, ಡಯಟ್ ಉಪನಿರ್ದೇಶಕ ಪುರುಷೋತ್ತಮ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೌಭಾಗ್ಯ, ಕಾಳೀರಯ್ಯ, ಚಂದ್ರಶೇಖರ್, ಆರ್‌ಸಿಎಚ್ ಅಧಿಕಾರಿ ಡಾ.ಸೋಮಶೇಖರ್, ಶಿಕ್ಷಣಾಧಿಕಾರಿ ಚಂದ್ರಕಾಂತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net