ಸೆ.23, 24ರಂದು ಮಂಡ್ಯ ನಗರದಲ್ಲಿ ಜಿಲ್ಲಾಮಟ್ಟದ ಪ್ರೌಢಶಾಲೆ ಬಾಲಕರ ಕಬಡ್ಡಿ ಪಂದ್ಯಾವಳಿ: ಪ್ರಶಸ್ತಿಗೆ ಸೆಣಸಲಿರುವ 32 ತಂಡ

District level kabaddi tournament press conference
Published on

ಮಂಡ್ಯ: ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ, ಡಾ.ಎಚ್.ಡಿ.ಚೌಡಯ್ಯ ಅಭಿಮಾನಿ ಬಳಗದ ವತಿಯಿಂದ ಸೆ.23 ಮತ್ತು 24ರಂದು ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ದಿ.ಡಾ.ಎಚ್.ಡಿ.ಚೌಡಯ್ಯ ಸ್ಮಾರಕ (ಬೆಳ್ಳಿ ಪರ್ಯಾಯ ಪಾರಿತೋಷಕ) ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕರ ಕಬಡ್ಡಿ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ಬಳಗದ ಸದಸ್ಯ ಪಣಕನಹಳ್ಳಿ ಯತೀಶ್ ತಿಳಿಸಿದರು.

ಪಂದ್ಯಾವಳಿಗೆಂದು ಈಗಾಗಲೇ 32 ತಂಡದ ಆಯ್ಕೆ ಮಾಡಲಾಗಿದೆ. ಟೂರ್ನಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿಯಮಾವಳಿಯಂತೆ ನಡೆಸಲಾಗುತ್ತದೆ. ಪ್ರತಿ ತಂಡಕ್ಕೆ 10 ಆಟಗಾರರು ಇರಲಿದ್ದು, ಆಟಗಾರರಿಗೆ ತಿಂಡಿ, ಊಟದ ವ್ಯವಸ್ಥೆ ಮಾಡಲಾಗಿದೆ. ವಿಜೇತ ತಂಡಕ್ಕೆ ಪರ್ಯಾಯ ಪಾರಿತೋಷಕ ಹಾಗೂ 10 ಜನ ಆಟಗಾರರಿಗೆ ವೈಯಕ್ತಿಕ ಬಹುಮಾನ ನೀಡಲಾಗುವುದು. ಹೊರ ತಾಲೂಕಿನ ತಂಡಗಳಿಗೆ ಪ್ರಯಾಣ ಭತ್ಯೆ ನೀಡಲಾಗುತ್ತದೆ. ಪಂದ್ಯಾವಳಿ ಸೆ.23ರಂದು ಬೆಳಗ್ಗೆ 8ಗಂಟೆಗೆ ಪ್ರಾರಂಭವಾಗಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಎಲ್ಲ ತಂಡಗಳಿಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಈ ವರ್ಷಆಟಗಾರರಿಗೆ ಕ್ರೀಡಾ ಸಮವಸ್ತ್ರ ನೀಡಲಾಗುವುದು. ಎಂಟು ವರ್ಷದಿಂದ ನಿರಂತರವಾಗಿ ಪಂದ್ಯಾವಳಿಯನ್ನು ನಡೆಸಿಕೊಂಡು ಬರುತ್ತಿದ್ದು, ಈ ಬಾರು ಸುಮಾರು ಒಂದೂವರೆಯಿಂದ ಎರಡು ಲಕ್ಷ ರೂ ವೆಚ್ಚವಾಗಲಿದೆ. ಕಳೆದೆರೆಡು ಬಾರಿ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ತಂಡ ಕಬಡ್ಡಿ ಪಂದ್ಯಾವಳಿಯಲ್ಲಿ ಗೆದ್ದು ಪರ್ಯಾಯ ಪಾರಿತೋಷಕ ಪಡೆದುಕೊಂಡಿದೆ. ಈ ಬಾರಿಯೂ ಗೆಲುವು ಸಾಧಿಸಿದಲ್ಲಿ ಪರ್ಯಾಯ ಪಾರಿತೋಷಕ ಅವರದ್ದಾಗುತ್ತದೆ ಎಂದು ತಿಳಿಸಿದರು.

ಬಳಗದ ಸಂಘಟನಾ ಕಾರ್ಯದರ್ಶಿ ಚಿನ್ನೇಗೌಡ, ಮನು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net