

ಮಡಿಕೇರಿ: ಮಡಿಕೇರಿಯ ಡಿಪಿ ಸ್ಫೋರ್ಟ್ಸ್ ಕ್ಲಬ್ ವತಿಯಿಂದ ಡಿ.೩ ರಂದು ಜಿಲ್ಲಾ ಮಟ್ಟದ ನಾಕೌಟ್ ಮಾದರಿಯ ಕಬಡ್ಡಿ ಚಾಂಪಿಯನ್ ಶಿಪ್ ಮಿಸ್ಟ್ ಕಪ್-೨೦೨೩ ಪಂದ್ಯಾವಳಿ ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್‌ನ ಸದಸ್ಯ ಬೊಳ್ಳಜಿರ ಬಿ.ಅಯ್ಯಪ್ಪ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಪುರಾತನ ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿ ದೇಶಕ್ಕೆ ಸಾಕಷ್ಟು ಕ್ರೀಡಾ ಪ್ರತಿಭೆಗಳನ್ನು ನೀಡಿ ಕ್ರೀಡಾ ಕ್ಷೇತ್ರದಲ್ಲಿ ಖ್ಯಾತಿಯನ್ನು ತಂದು ಕೊಟ್ಟಿದೆ. ಜಿಲ್ಲೆಯಲ್ಲಿಯ ಕಬಡ್ಡಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ, ಬೆಳೆಸುವ ನಿಟ್ಟಿನಲ್ಲಿ ಪಂದ್ಯಾಟ ಆಯೋಜಿಸಲಾಗಿದೆ. ಹರಿಯಾಣದಲ್ಲಿ ನಡೆದ ಸೀನಿಯರ್ ನ್ಯಾಷನಲ್ ಕಬಡ್ಡಿ ಚಾಂಪಿಯನ್ ಶಿಪ್‌ನಲ್ಲಿ ಆಡಿರುವ ಕಬಡ್ಡಿ ಕ್ರೀಡಾಪಟು ಹೊಟ್ಟೆಯಂಡ ಸಚಿನ್ ಪೂವಯ್ಯ ನೇತೃತ್ವದಲ್ಲಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಅಂದು ಬೆಳಿಗ್ಗೆ ೯.೩೦ ಗಂಟೆಗೆ ನಡೆಯಲಿರುವ ಪಂದ್ಯಾವಳಿಯನ್ನು ರಾಷ್ಟ್ರೀಯ ತರಬೇತುದಾರ ಮಂಜುನಾಥ್ ಹಾಗೂ ರಾಷ್ಟ್ರೀಯ ಕಬಡ್ಡಿ ಆಟಗಾರ ಶಶಿಧರ್ ಉದ್ಘಾಟಿಸಲಿದ್ದಾರೆ. ಡಿಪಿ ಸ್ಫೋರ್ಟ್ಸ್ ಕ್ಲಬ್‌ನ ಕಾರ್ಯದರ್ಶಿ ಅಜ್ಜಮಕ್ಕಡ ವಿನು ಕುಶಾಲಪ್ಪ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಆಸ್ಟ್ರಾ ಕಾಫಿ ಲಿಂಕ್ಸ್ ಮಾಲೀಕ ಕುಮಾರ್, ಅರ್ಜುನ ಪ್ರಶಸ್ತಿ ವಿಜೇತ ಸಿ.ಹೊನ್ನಪ್ಪ ಗೌಡ, ಬೆಂಗಳೂರಿನ ಬಿಎಂಟಿಸಿಯ ಗಂಗಾ ಹನುಮಯ್ಯ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ರೂ.೧೫,೦೦೦ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ.೧೦,೦೦೦ ನಗದು ಹಾಗೂ ಟ್ರೋಫಿ, ತೃತೀಯ ಹಾಗೂ ನಾಲ್ಕನೇ ವಿಜೇತ ತಂಡಕ್ಕೆ ತಲಾ ರೂ.೫,೦೦೦ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗವುದು. ಪಂದ್ಯಾವಳಿಯಲ್ಲಿ ೧೫ಕ್ಕೂ ಹೆಚ್ಚು ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಆಸಕ್ತ ತಂಡಗಳು ನ.೩೦ರ ಒಳಗೆ ಪ್ರವೇಶ ಶುಲ್ಕ ರೂ.೧,೦೦೦ ಪಾವತಿಸಿ, ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ೮೭೬೨೮೮೦೩೫೫, ೬೩೬೨೦೯೯೫೨೫ ಸಂಪರ್ಕಿಸಬಹುದಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕ್ಲಬ್‌ನ ಅಧ್ಯಕ್ಷ ಹೊಟ್ಟೆಯಂಡ ಸಚಿನ್ ಪೂವಯ್ಯ, ಕಾರ್ಯದರ್ಶಿ ಕಾಂಗೀರ ಗಗನ್, ಖಜಾಂಚಿ ದಿಲೀಪ್ ತೋರೆರ, ಸದಸ್ಯರಾದ ಪ್ರದೀಪ್ ಕಂಡಕೆರೆ, ಪೊನ್ನಚೆಟ್ಟೀರ ಪ್ರದೀಪ್ ಉಪಸ್ಥಿತರಿದ್ದರು.