ಕುಷ್ಠರೋಗ ನಿರ್ಮೂಲನಕ್ಕೆ ಸಹಕರಿಸಿ: ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಮನವಿ

District level inter-departmental coordination committee meeting mandya
Published on

ಮಂಡ್ಯ: ಸಾರ್ವಜನಿಕರು ತಮ್ಮ ನೆರೆಹೊರೆ ಅಥವಾ ಸಂಬಂಧಿಕರಲ್ಲಿ ಕುಷ್ಠರೋಗದ ಲಕ್ಷಣಗಳು ಕಂಡುಬಂದರೆ ಕೂಡಲೇ ಆರೋಗ್ಯ ಇಲಾಖೆ ಸಂಪರ್ಕಿಸಿ ತಪಾಸಣೆಗೆ ಒಳಪಡಿಸಬೇಕು. ಈ ಮೂಲಕ ರೋಗ ನಿರ್ಮೂಲನಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮನವಿ ಮಾಡಿದರು.

ನಗರದ ಜಿಪಂ ಕಚೇರಿಯ ಮಿನಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ, ಸ್ಪರ್ಶ್ ಕುಷ್ಠರೋಗ ಜಾಗೃತಿ ಕಾರ್ಯಕ್ರಮದ ಜಿಲ್ಲಾಮಟ್ಟದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ 1,318 ಆಶಾ ಕಾರ್ಯಕರ್ತೆಯರಿದ್ದಾರೆ. ಪಾಕ್ಷಿಕ ದಿನಾಚರಣೆ ಆಚರಿಸುತ್ತಿರುವ ಜ.30ರಿಂದ ಫೆ.13ರವರೆಗೆ ಪ್ರತಿ ಮನೆಗೆ ಭೇಟಿ ನೀಡಿ ಕುಷ್ಠರೋಗ ಸಮೀಕ್ಷೆ ನಡೆಸಬೇಕು ಎಂದರು.

ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್ ಮಾತನಾಡಿ, ಜಿಲ್ಲೆಯಲ್ಲಿ 28 ಸೇರಿದಂತೆ ರಾಜ್ಯದಲ್ಲಿ 2,500 ಕುಷ್ಠರೋಗ ಪ್ರಕರಣಗಳಿವೆ. ಮಂಡ್ಯದಲ್ಲಿ ಈ ವರ್ಷ 16 ಕೇಸ್ ದಾಖಲಾಗಿದೆ. ರೋಗದ ನಿರ್ಮೂಲನೆಗೆ ಸೂಕ್ತ ಚಿಕಿತ್ಸೆ ಹಾಗೂ ಔಷಧವನ್ನು ನೀಡಲಾಗುತ್ತಿದೆ. ಈಗಾಗಲೇ ಚಿಕಿತ್ಸೆ ಪಡೆದು ಗುಣಮುಖರಾದವರಿಗೆ ಆರೈಕೆ ಹಾಗೂ ಅಗತ್ಯವಿರುವ ಔಷಧ, ಸಾಧನ ಸಲಕರಣೆಗಳನ್ನು ನೀಡುವ ಮೂಲಕ ಸಮುದಾಯದಲ್ಲಿ ವೈದ್ಯಕೀಯ ಪುನರ್ವಸತಿ ಶಿಬಿರವನ್ನು ನಡೆಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ಮಿಮ್ಸ್ ಶಸ್ತ್ರಚಿಕಿತ್ಸಕಿ ಡಾ.ಗಾಯತ್ರಿ, ಆರ್‌ಸಿಎಚ್ ಅಧಿಕಾರಿ ಡಾ.ಅನಿಲ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net