

ಉಡುಪಿ: ಜಿಲ್ಲೆಯಲ್ಲಿ ಹೊಸ ಕೈಗಾರಿಕಾ ಪ್ರದೇಶ ನಿಮಾರ್ಣಕ್ಕೆ ಗುರುತಿಸಿರುವ ಶಿವಪುರದ ಕೆರೆಬೆಟ್ಟು ಹಾಗೂ ನಿಟ್ಟೆ ವ್ಯಾಪ್ತಿಯಲ್ಲಿ ಭೂ ಸ್ವಾಧಿನ ಪ್ರಕ್ರಿಯೆ ತ್ವರಿತ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಸೂಚನೆ ನೀಡಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕೈಗಾರಿಕಾ ಸ್ಪಂದನ ಸಮಿತಿ ಸಭೆ, ಕ್ಲಸ್ಟರ್ ಸಮಿತಿ ಸಭೆ, ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ, ಜಿಲ್ಲಾ ಮಟ್ಟದ ರಫ್ತು ಉತ್ತೇಜನಾ ಸಮಿತಿ ಸಭೆ ಹಾಗೂ ಪ್ರಧಾನಮಂತ್ರಿಗಳ ಉದ್ಯೋಗ ಸೃಜನಾ ಯೋಜನೆಯ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿಸ್ಥಳಿಯ ಜನರಿಗೆ ಉದ್ಯೋಗ ದೊರಕಿಸಿಕೊಡುವ ಆಶಯದೊಂದಿಗೆ ಹೆಬ್ರಿ ತಾಲೂಕಿನ ಶಿವಪುರ ಹಾಗೂ ಕೆರೆಬೆಟ್ಟು ಗ್ರಾಮಗಳಲ್ಲಿ 113.59 ಎಕ್ರೆ, ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ 50.42 ಎಕ್ರೆ, ಬ್ರಹ್ಮಾವರ ತಾಲೂಕಿನ ಉಪ್ಪೂರಿನಲ್ಲಿ 101.19 ಎಕ್ರೆ ಜಮೀನಿನ ಭೂ ಸ್ವಾಧಿನ ಪ್ರಕ್ರಿಯೆ ನಡೆಯುತ್ತಿದ್ದು, ಶ್ರೀದಲ್ಲಿ ಕೆ.ಐ.ಡಿ.ಬಿ. ಗೆ ಹಸ್ತಾಂತರಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆ ಹಾಗೂ ಮಧ್ಯಮ ಕೈಗಾರಿಕೆಗಳಲ್ಲಿ ಡಾ.ಸರೋಜಿನಿ ಮಹಿಷಿ ವರದಿಯಂತೆ ಸ್ಥಳಿಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ಕೆಲವು ಕೈಗಾರಿಕೆಗಳಲ್ಲಿ ಕೇವಲ ಡಿ ಗ್ರೂಪ್ ಹುದ್ದೆಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ಎಲ್ಲಾ ಹುದ್ದೆಗಳಲ್ಲಿಯೂ ಸ್ಥಳಿಯರ ನೇಮಕಾತಿಗೆ ಅವಕಾಶ ಮಾಡಿಕೊಡಬೇಕು. ನೇಮಕಾತಿಗೆ ಸಂಬಂಧಪಟ್ಟ ಸೂಕ್ತ ದಾಖಲೆಗಳನ್ನು ನಿರ್ವಹಣೆ ಮಾಡಬೇಕೆಂದು ಸೂಚನೆ ನೀಡಿದರು.
ಹೊಸದಾಗಿ ಕೈಗಾರಿಕೆ ಸ್ಥಾಪನೆಗೆ ಹಂಚಿಕೆಯಾಗಿರುವ ಜಮೀನನ್ನು ಕೂಡಲೇ ಬಳಕೆ ಮಾಡಿಕೊಂಡು ರ್ನಿದಿಷ್ಟ ಸಮಯದಲ್ಲಿ ಪ್ರಾರಂಭಿಸಬೇಕು. ಒಂದೊಮ್ಮೆ ಕೈಗಾರಿಕೆಗಳನ್ನು ಪ್ರಾರಂಭಿಸದೇ ಇದ್ದಲ್ಲಿ ಕೆ.ಐ.ಡಿ.ಬಿ ಕಾಯ್ದೆ ಅನ್ವಯ ಶೇ.2 ರಷ್ಟು ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುವುದು. ಕೈಗಾರಿಕೆ ಚಟುವಟಿಕೆ ಬದಲಾವಣೆ ಮಾಡಿ ನಡೆಸುತ್ತಿದ್ದಲ್ಲಿ ಅವುಗಳಿಗೆ ಪೂರ್ವಾನುಮತಿ ಪಡೆಯಬೇಕು ಎಂದು ಸೂಚನೆ ನೀಡಿದರು.
ಕೈಗಾರಿಕ ಪ್ರದೇಶಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ ಸೇರಿದಂತೆ ನೀರಿನ ವ್ಯವಸ್ಥೆ ಕಲ್ಪಿಸಬೇಕು. ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಲು ವಿದ್ಯುತ್ ಸಾಮರ್ಥ್ಯವನ್ನು ಹೆಚ್ಚಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೆ.ಎಸ್.ಎಸ್.ಐ.ಡಿ.ಸಿ ಯ ಕೈಗಾರಿಕಾ ವಸಾಹತುನಲ್ಲಿರುವ ಖಾಲಿ ಇರುವ ಮಳಿಗೆ ಹಾಗೂ ನಿವೇಶನಗಳ ಹಂಚಿಕೆ ಮಾಡುವ ಕುರಿತು ಪ್ರಕಟಣೆ ನೀಡಲಾಗಿದ್ದು, ಶೀಘ್ರದಲ್ಲಿಯೇ ಹಂಚಿಕೆ ಮಾಡಲು ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.
ಜಿಲ್ಲೆಯ ಉತ್ಪನ್ನಗಳಿಗೆ ವಿದೇಶಿ ರಫ್ತನ್ನು ಉತ್ತೇಜಿಸಲಾಗುವುದು. ಮೀನಿನ ಉತ್ಪಾದನೆಯು ಸಹ ಹೆಚ್ಚಿದೆ. ಎಕ್ಸ್ಪೋರ್ಟ್ ಕಮಿಟಿಗಳು ವಿದೇಶಗಳಿಗೆ ಉತ್ಪನ್ನಗಳನ್ನು ರಫ್ತು ಮಾಡಲು ಅನುಕೂಲಮಾಡಿಕೊಡಲು ಅನೇಕ ಸಲಹೆಗಳನ್ನು ನೀಡಬೇಕು. ಈ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಕೈಗಾರಿಕಾ ಪ್ರದೇಶಗಳಲ್ಲಿ ಕೈಗಾರಿಕೆ ಕಟ್ಟಡ ನಿಮಾರ್ಣ ಮಾಡಲು ಸ್ಥಳಿಯ ಪಂಚಾಯಿತಿಯಿಂದ ಅನುಮತಿ ಪಡೆದುಕೊಳ್ಳಬೇಕು. ಆಸ್ತಿ ತೆರಿಗೆಯನ್ನು ಸಹ ಪಾವತಿ ಮಾಡಬೇಕೆಂದು ತಿಳಿಸಿದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ. ನಾಯಕ್, ಪೌರಾಯುಕ್ತ ರಾಯಪ್ಪ, ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್, ಕೆ.ಐ.ಡಿ.ಬಿ ಅಧಿಕಾರಿ ಶ್ರೀನಿವಾಸ ಮೂರ್ತಿ, ಉಪಸ್ಥಿತರಿದ್ದರು.