ಬಾಳೆಹೊನ್ನೂರಲ್ಲಿ ಅ.1ಕ್ಕೆ ಜಿಲ್ಲಾಮಟ್ಟದ ಪ್ರೌಢಶಾಲಾ ಕ್ರೀಡಾಕೂಟ

bhr sport
ಬಾಳೆಹೊನ್ನೂರಿನಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದ ಆಹ್ವಾನ ಪತ್ರಿಕೆಯನ್ನು ಎನ್.ಆರ್.ಪುರ ಬಿಇಒ ಕೆ.ಆರ್.ಪುಷ್ಪಾ ಬಿಡುಗಡೆಗೊಳಿಸಿದರು. ಡಾ. ವೈ.ಎ.ಸುರೇಶ್, ಟಿ.ಎಂ.ಉಮೇಶ್, ಎಂ.ಕೆ.ಸುಂದರೇಶ್, ಪಾಲಾಕ್ಷಮೂರ್ತಿ ಇತರರಿದ್ದರು.
Published on

ಬಾಳೆಹೊನ್ನೂರು: ಚಿಕ್ಕಮಗಳೂರು ಜಿಲ್ಲಾಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ಅ.1ರಂದು ಪಟ್ಟಣದ ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಆತಿಥ್ಯದಲ್ಲಿ ಪಟ್ಟಣದಲ್ಲಿ ನಡೆಯಲಿದೆ ಎಂದು ಬಿಜಿಎಸ್ ಸಮೂಹ ಸಂಸ್ಥೆಯ ಪ್ರಾಚಾರ್ಯ ಡಾ. ವೈ.ಎ.ಸುರೇಶ್ ತಿಳಿಸಿದರು.

ಜಿಲ್ಲಾ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ ನಡೆಸಲು ಈ ಬಾರಿ ಎನ್.ಆರ್.ಪುರ ತಾಲೂಕಿಗೆ ಅವಕಾಶ ಒದಗಿ ಬಂದಿದ್ದು, ಬಿಜಿಎಸ್ ಪ್ರೌಢಶಾಲೆ ಆತಿಥ್ಯ ವಹಿಸಿಕೊಂಡಿದೆ. ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಹಯೋಗದಲ್ಲಿ ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ನಡೆಸಲು ಸಿದ್ಧತೆ ಮಾಡಿಕೊಂಡಿದ್ದು, ವಾಲಿಬಾಲ್, ಖೋಖೋ, ಬಾಲ್ ಬ್ಯಾಡ್ಮಿಂಟನ್, ಕಬಡ್ಡಿ ಹಾಗೂ ಥ್ರೋಬಾಲ್‌ನ ಗುಂಪು ಆಟಗಳು ನಡೆಯಲಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲೆಯ ವಿವಿಧೆಡೆಯಿಂದ ಸುಮಾರು 960 ವಿದ್ಯಾರ್ಥಿಗಳು ಸ್ಪರ್ಧೆಗಳಿಗೆ ಬರಲಿದ್ದು, ಶೃಂಗೇರಿ ಆದಿಚುಂಚನಗಿರಿ ಮಠದಿಂದ ಕ್ರೀಡಾಪಟುಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಶಾಲೆಯ ವಿದ್ಯಾರ್ಥಿಗಳು, ಪಾಲಕರು ಬಹುಮಾನದ ಪ್ರಾಯೋಜಕತ್ವ ನೀಡಿದ್ದಾರೆ. ಗುಂಪು ಆಟಗಳಿಗೆ ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಅಂಕಣಗಳ ವ್ಯವಸ್ಥೆ ಮಾಡಿದ್ದು, ಪಂದ್ಯಾವಳಿಗಳನ್ನು ಯಶಸ್ವಿಗೊಳಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅ.1ರಂದು ಬೆಳಗ್ಗೆ 9 ಗಂಟೆಗೆ ಆರಂಭಗೊಳ್ಳುವ ಕ್ರೀಡಾಕೂಟದಲ್ಲಿ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಟಿ.ಡಿ.ರಾಜೇಗೌಡ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಎನ್.ಆರ್.ಪುರ ಬಿಇಒ ಕೆ.ಆರ್.ಪುಷ್ಪಾ ಮಾತನಾಡಿ, ಜಿಲ್ಲಾಮಟ್ಟದ ಕ್ರೀಡಾಕೂಟ ನಡೆಸಲು ಆತಿಥ್ಯ ತಾಲೂಕಿಗೆ ಬಹಳ ಗುರುತರ ಜವಾಬ್ದಾರಿ ಇದೆ ಎಂದರು.
ಬಿಜಿಎಸ್ ಕಾಲೇಜು ಸಲಹಾ ಸಮಿತಿ ಸದಸ್ಯ ಟಿ.ಎಂ.ಉಮೇಶ್ ಕಲ್ಮಕ್ಕಿ ಮಾತನಾಡಿ, ಕ್ರೀಡಾಕೂಟ ನಡೆಸುವಾಗ ಶಿಕ್ಷಕರ ಪಾತ್ರ ಮಹತ್ವದ್ದಾಗಿರುತ್ತದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಉತ್ತಮ ತೀರ್ಪು ನೀಡುವಂತೆ ನೋಡಿಕೊಳ್ಳಬೇಕು ಎಂದರು.
ಕಾಲೇಜು ಸಲಹಾ ಸಮಿತಿ ಸದಸ್ಯ ಎಂ.ಕೆ.ಸುಂದರೇಶ್, ಕೆ.ಟಿ.ವೆಂಕಟೇಶ್, ಪ್ರಮುಖರಾದ ಪಾಲಾಕ್ಷಮೂರ್ತಿ, ಕೆ.ಎಂ.ರಾಘವೇಂದ್ರ, ಕೊಟ್ರೇಶಪ್ಪ, ಮಾಲತೇಶ್, ಕಟ್ಟೇಗೌಡ, ಉಮೇಶ್, ವೆಂಕಟೇಶ್‌ಭಟ್, ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net