ಸೌಲಭ್ಯ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್ ಸಲಹೆ

District level folk dance show Mandya
Published on

ಮಂಡ್ಯ: ವೃತ್ತಿ ಕಲಾವಿದರು ತಮ್ಮ ಕಲೆಯ ಪ್ರದರ್ಶನ ನೀಡುವ ಮೂಲಕ ಬದುಕನ್ನು ಕಟ್ಟಿಕೊಂಡಿದ್ದಾರೆ. ಇನ್ನೂ ಕೆಲ ಕಲಾವಿದರು ಪ್ರೌವೃತ್ತಿಯಾಗಿ ಕಲೆ ಅಳವಡಿಸಿಕೊಂಡಿದ್ದಾರೆ. ಅಂತೆಯೇ ಸರ್ಕಾರದಿಂದ ಸಿಗುವ ಸೌಲಭ್ಯ ಬಳಸಿಕೊಂಡು ಆರ್ಥಿಕವಾಗಿ ಸದೃಢವಾಗಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್ ಸಲಹೆ ನೀಡಿದರು.

ನಗರದ ಹರ್ಡೀಕರ್ ಭವನದಲ್ಲಿ ಹೆಮ್ಮಿಗೆ ಮಲೆಮಹದೇಶ್ವರ ಜಾನಪದ ಸುಗಮ ಸಂಗೀತ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ಜಾನಪದ ನೃತ್ಯ, ಕಲೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಇಲಾಖೆಯ ಮೂಲ ಉದ್ದೇಶವೇ ಕಲೆ ಮತ್ತು ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿಯೂ ಅತಿ ಹೆಚ್ಚು ಕಲಾವಿದರಿಗೆ ಅವಕಾಶ ನೀಡಿ ಪ್ರೋತ್ಸಾಹಿಸಲಾಯಿತು ಎಂದರು.

ಸಹ ಪ್ರಾಧ್ಯಾಪಕಿ ಡಾ.ಎಂ.ಕೆಂಪಮ್ಮ ಮಾತನಾಡಿ, ಜಾನಪದ, ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕೆಲಸವನ್ನು ಎಲ್ಲರೂ ಮಾಡಬೇಕು. ಕರ್ನಾಟಕವು ಸಾಂಸ್ಕೃತಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ರಾಜ್ಯದಲ್ಲಿ ಮಂಡ್ಯ ಜಿಲ್ಲೆ ಜಾನಪದ ಸೇರಿದಂತೆ ವಿವಿಧ ಕಲಾಕ್ಷೇತ್ರಗಳಿಗೆ ಹಲವು ಕೊಡುಗೆ ನೀಡಿದೆ. ಇಲ್ಲಿ ಕಲೆಯ ಆರಾಧಕರು ಇದ್ದಾರೆ. ಸ್ಥಳೀಯ ಕಲಾವಿದರಿಗೆ ಮಾನ್ಯತೆ ನೀಡಿ ಸಹಕಾರ ಕೊಟ್ಟರೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಹಿರಿಯರು ತಮ್ಮ ಜೀವನದ ಅನುಭವಗಳನ್ನು ಹಾಡುಗಳ ಮೂಲಕ ಜಾನಪದವನ್ನು ತಿಳಿಸುತ್ತಿದ್ದರು. ಜತೆಗೆ ಒಗಟ್ಟು ಹಾಗೂ ಗಾದೆಗಳಲ್ಲಿ ಜೀವನದ ಶೈಲಿಯನ್ನು ವ್ಯಕ್ತಪಡಿಸುತ್ತಿದ್ದ ಕಾಲವಿತ್ತು. ಅದು ಮತ್ತೆ ಮರುಗಳಿಸಬೇಕು. ಏಕೆಂದರೆ ಜನಪದವೇ ನಮ್ಮ ಜೀವನಾಡಿಯಾಗಿದೆ ಎನ್ನುವುದು ಮುಖ್ಯವಾಗಬೇಕು ಎಂದು ತಿಳಿಸಿದರು.

ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕೆ.ಎಂ.ಸುರೇಶ್, ಕಲಾವಿದರಾದ ಸಂಪಹಳ್ಳಿ ಬಸವರಾಜು, ಆರ್.ಕೆ.ಸ್ವಾಮಿ, ಟ್ರಸ್ಟ್ ಅಧ್ಯಕ್ಷ ದೇವೀರಮ್ಮ, ಕಾರ್ಯದರ್ಶಿ ಎಚ್.ಎಂ.ಮಹದೇವು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net