

ಉಡುಪಿ: ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ಸಂಪೂರ್ಣವಾಗಿ ನಿಮೂರ್ಲನೆಗೆ ತ್ವರಿತಕ್ರಮ ಕೈಗೊಳ್ಳಬೇಕು. ಈ ವೃತ್ತಿಯಲ್ಲಿ ತೊಡಗಿರುವ ಮಕ್ಕಳನ್ನು ಗುರುತಿಸಿ ಶಿಕ್ಷಣವಂತರನ್ನಾಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಕರೆ ನೀಡಿದರು.
ಗುರುವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಬಾಲಕಾರ್ಮಿಕ ಯೋಜನಾ ಸಂಘದ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ, ಸಲಹಾ ಸಮಿತಿ ಮತ್ತು ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳು ತಮ್ಮ ಬಾಲ್ಯಾವಸ್ಥೆಯಲ್ಲಿಯೇ ದುಡಿಮೆಗೆ ತೊಡಗಿಕೊಂಡಲ್ಲಿ ಅವರುಗಳು ಶಿಕ್ಷಣದಿಂದ ವಂಚಿತರಾಗುವುದರ ಜೊತೆಗೆ ಮಾನಸಿಕ ಹಾಗೂ ದೈಹಿಕ ಶಾರೀರಿಕ ಬೆಳವಣಿಗೆಗೆ ಹಾನಿ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಬಾಲಕಾರ್ಮಿಕ ರಕ್ಷಣಾ ಕಾಯಿದೆಯನ್ನು ಜಾರಿಗೆ ತರಲಾಗಿದೆ. ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದರು. ಜಿಲ್ಲೆಯ ಮಲ್ಪೆ ಮೀನುಗಾರಿಕೆಯ ಹರಾಜು ಸ್ಥಳಗಳಲ್ಲಿ, ಕೆಲವು ವಾಣಿಜ್ಯ ಸ್ಥಳಗಳಲ್ಲಿ, ಕಲ್ಲುಕೋರೆಗಳಲ್ಲಿ ಮರಳು ತೆಗೆಯುವ ಪ್ರದೇಶಗಳು ಸೇರಿದಂತೆ ವಿವಿಧೆಡೆ ಮಕ್ಕಳು ದುಡಿಮೆಗೆ ತೊಡಗಿಕೊಳ್ಳುತ್ತಿರುವ ಪ್ರಕರಣಗಳು ವರದಿಯಾಗಿವೆ. ಇಂತಹ ತಾಣಗಳ ಮೇಲೆ ನಿರಂತರವಾಗಿ ಆಗಿಂದಾಗ್ಗೆ ಹಠಾತ್ ದಾಳಿ ನಡೆಸಿ, ಮಕ್ಕಳು ನಿಯೋಜನೆ ಮಾಡಿರುವುದು ಕಂಡುಬಂದಲ್ಲಿ ಪ್ರಕರಣ ದಾಖಲಿಸಬೇಕು ಎಂದು ಸೂಚನೆ ನೀಡಿದರು.
ಬಾಲ ಕಾರ್ಮಿಕರಾಗಿ ಕಂಡುಬಂದ ಮಕ್ಕಳಿಗೆ ಬಾಲ ಕಾರ್ಮಿಕ ಪುನರ್ವಸತಿ ನಿಧಿ ಹಾಗೂ ಕಾರ್ಪಸ್ ನಿಧಿಯಲ್ಲಿ ವಿದ್ಯಾಭ್ಯಾಸಕ್ಕಾಗಿ 35000 ರೂ. ನೀಡಬೇಕು. ಆದರೆ ಅನೇಕ ಪ್ರಕರಣಗಳಲ್ಲಿ ಹಣ ನೀಡದಿರುವುದು ಕಂಡು ಬಂದಿದೆ. ಇಂಥ ಮಕ್ಕಳಿಗೆ ಕೂಡಲೇ ಅನುದಾನವನ್ನು ನೀಡಬೇಕು ಎಂದು ಸೂಚನೆ ನೀಡಿದರು. ಪುನರಾವರ್ತಿತವಾಗಿ ಬಾಲ ಕಾರ್ಮಿಕರನ್ನು ನಿಯೋಜಿಸಿಕೊಂಡ ಸಂಸ್ಥೆ ಅಥವಾ ವಾಣಿಜ್ಯ ಉದ್ಯಮಿಗಳಿದ್ದಲ್ಲಿ ಅಂತಹ ಸಂಸ್ಥೆಯ ಪರವಾನಿಗೆಯನ್ನು ರದ್ದುಪಡಿಸಲು ಸ್ಥಳಿಯ ಸಂಸ್ಥೆಗಳು ಕ್ರಮ ವಹಿಸುವಂತೆ ವೃತ್ತ ನಿರೀಕ್ಷಕರು ನೋಡಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ 2024&-25 ನೇ ಸಾಲಿನಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಒಟ್ಟು 1032 ತಪಾಸಣೆ ನಡೆಸಿದಾಗ, 2 ಅಪಾಯಕಾರಿ ಹಾಗೂ 3 ಅಪಾಯಕಾರಿಯಲ್ಲದ ಸಂಸ್ಥೆಗಳಲ್ಲಿ ಕಿಶೋರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಒಟ್ಟು 5 ಪ್ರಕರಣ ದಾಖಲಿಸಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್ ಬಾಯಲ್ ಮಾತನಾಡಿ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ ಸಮನ್ವಯದೊಂದಿಗೆ ಮಾಡಬೇಕು. ಅವಶ್ಯವಿದ್ದಲ್ಲಿ ಮಕ್ಕಳ ಶಿಕ್ಷಣ ಮುಂದುವರೆಸಲು ವಸತಿ ಶಾಲೆ, ಹಾಸ್ಟಲ್ಗಳಂತಹ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮದ್, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ ನಾಯಕ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಶೋಕ್ ಕಾಮತ್, ಬಾಲ ಕಾರ್ಮಿಕ ಯೋಜನಾ ಸಂಸ್ಥೆಯ ಯೋಜನಾ ನಿರ್ದೇಶಕಿ ಅಮೃತಾ ಮತ್ತಿತರರು ಉಪಸ್ಥಿತರಿದ್ದರು.