

ವಿಜಯವಾಣಿ ಸುದ್ದಿಜಾಲ ಧಾರವಾಡ
ಉದ್ಯೋಗ ಮಾಹಿತಿ ಹಾಗೂ ತರಬೇತಿ ಕೇಂದ್ರ, ಕೆ.ಇ. ಬೋರ್ಡ್ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಕಾಲೇಜು, ಕೌಶಲಾಭಿವೃದ್ಧಿ ಹಾಗೂ ಕೈಗಾರಿಕಾ ತರಬೇತಿ ಉದ್ಯೋಗ ಇಲಾಖೆ ವತಿಯಿಂದ ಜೂ. 30ರಂದು ಇಲ್ಲಿನ ಶಿವಾಜಿ ವೃತ್ತ ಬಳಿಯ ಕೆ.ಇ. ಬೋರ್ಡ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮೇಳಕ್ಕೆ ಚಾಲನೆ ನೀಡುವರು. ಅತಿಥಿಗಳಾಗಿ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ ಪಾಲ್ಗೊಳ್ಳಲಿದ್ದಾರೆ. ಡಿ.ಎಸ್. ರಾಜಪುರೋಹಿತ ಉಪಸ್ಥಿತರಿರುವರು. ಕಾರ್ಯಾಧ್ಯಕ್ಷ ಎಸ್.ಟಿ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಬೆಂಗಳೂರು, ಪುಣೆ, ಹೈದ್ರಾಬಾದ್, ಕೇರಳ, ಬೆಳಗಾವಿ ಸೇರಿ ವಿವಿಧ ಕಡೆಗಳಲ್ಲಿನ 51 ಕಂಪನಿಗಳು ಭಾಗವಹಿಸಲಿವೆ. ಬಿಎ, ಬಿಕಾಂ, ಬಿಎಸ್ಸಿ, ಎಂಎ, ಎಂಎಸ್ಸಿ, ಬಿಬಿಎ, ಬಿಸಿಎ, ಎಂಬಿಎ, ಬಿ.ಇಡಿ, ಬಿಇ, ಎಂಟೆಕ್ ಸೇರಿ ಎಲ್ಲ ಬಗೆಯ ಪದವೀಧರರು, ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ ಹಾಗೂ ಡಿಪ್ಲೋಮಾ ತೇರ್ಗಡೆ ಹೊಂದಿದವರು ಮೇಳದಲ್ಲಿ ಪಾಲ್ಗೊಳ್ಳಬಹುದು. ಈಗಾಗಲೇ ಸಾಕಷ್ಟು ಜನರು ಕರೆ ಮಾಡಿ ಮೇಳದ ಮಾಹಿತಿ ಪಡೆಯುತ್ತಿದ್ದಾರೆ ಎಂದರು.
ಅಂದು ಬೆಳಗ್ಗೆ 9 ಗಂಟೆಯಿಂದ ನೋಂದಣಿ ಕಾರ್ಯ ಆರಂಭವಾಗಲಿದ್ದು, 2ಗಂಟೆವರೆಗೆ ನಡೆಯಲಿದೆ. ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ. ನೋಂದಣಿಗಾಗಿ 8 ಕೌಂಟರ್, ಸಂದರ್ಶನ ನಡೆಸಲು 18 ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಮೇಳದ ಯಶಸ್ವಿಗೆ 41 ಉಪನ್ಯಾಸಕರು ಹಾಗೂ 100 ಎನ್ಎಸ್ಎಸ್ ಸ್ವಯಂ ಸೇವಕರ ಸಹಾಯ ಪಡೆಯಲಾಗಿದೆ ಎಂದರು.
ಈಗಾಗಲೇ 1500ಕ್ಕೂ ಹೆಚ್ಚು ಜನರು ಕರೆ ಮಾಹಿತಿ ಮೇಳದ ಮಾಹಿತಿ ಪಡೆದಿದ್ದಾರೆ. ಹೀಗಾಗಿ ಸುಮಾರು 2000 ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ಗದಗ, ಕಾರವಾರ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಸಹ ಜಿಲ್ಲಾ ಮಟ್ಟದ ಉದ್ಯೋಗ ಮೇಳಗಳನ್ನು ಇದೇ ವರ್ಷದಲ್ಲಿ ಏರ್ಪಡಿಸಲು ಚಿಂತಿಸಲಾಗಿದೆ ಎಂದರು.
ಡಿ.ಎಸ್. ರಾಜಪುರೋಹಿತ, ಮೋಹನ ಸಿದ್ದಾಂತಿ, ಎಸ್.ಎಲ್. ಶೇಖರಗೋಳ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.