ಸೆಪ್ಟಂಬರ್‌ನಲ್ಲಿ ಜಿಲ್ಲಾ ಮಟ್ಟದ ಜಿಲ್ಲಾ ಯುವ ಉತ್ಸವ

P.P.SUKUMAR
Published on

ಮಡಿಕೇರಿ: ಜಿಲ್ಲೆಯ ಯುವಕ, ಯುವತಿಯರಿಗಾಗಿ ರಾಷ್ಟ್ರೀಯ ಏಕತೆ ಹಾಗೂ ಒಗ್ಗಟ್ಟು ಎಂಬ ವಿಷಯದಡಿ ಸೆಪ್ಟಂಬರ್ ತಿಂಗಳ ಮೊದಲ ವಾರದಲ್ಲಿ ಜಿಲ್ಲಾ ಮಟ್ಟದ ಜಿಲ್ಲಾ ಯುವ ಉತ್ಸವ(ಪಂಚ್ ಪ್ರಾಣ್/India@2047) ಎಂಬ ವಿನೂತನ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ ಎಂದು ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ತಿಳಿಸಿದ್ದಾರೆ.


ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಭಾರತ ಸರ್ಕಾರ, ನೆಹರು ಯುವ ಕೇಂದ್ರ, ಯುವ ಜನ ವ್ಯವಹಾರ ಕ್ರೀಡಾ ಸಚಿವಾಲಯ, ಮಡಿಕೇರಿ ಕೊಡಗು. ಜಿಲ್ಲಾಡಳಿತ, ಜಿ.ಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಡಗು, ಜಿಲ್ಲಾ ಯುವ ಒಕ್ಕೂಟ ಕೊಡಗು, ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ತಾಲೂಕು ಯುವ ಒಕ್ಕೂಟ, ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆಯಲಿದೆ. ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿರುವ ವಿವಿಧ ಸ್ಪರ್ಧಾ ಕಾರ್ಯಕ್ರಮದಲ್ಲಿ ಜಿಲ್ಲೆಯ ೧೫ ವರ್ಷದಿಂದ ೨೯ ವರ್ಷ ವಯೋಮಿತಿಯ ಜಿಲ್ಲೆಯ ಯುವಕ, ಯುವತಿಯರು ಭಾಗವಹಿಸಬಹುದಾಗಿದೆ. ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ನಗದು ಬಹುಮಾನ ಹಾಗೂ ಆಕರ್ಷಕ ಪಾರಿತೋಷಕ ನೀಡಲಾಗುವುದೆಂದು ತಿಳಿಸಿದರು.


ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವಿಜೇತರಾದವರು ರಾಜ್ಯ ಮಟ್ಟದ ಕಾರ್ಯಕ್ರಮಗಳಿಗೆ ಭಾಗವಹಿಸಬಹುದಾಗಿದ್ದು, ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದವರು, ರಾಷ್ಟ್ರ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಇದು ಸ್ಪರ್ಧಾ ಕಾರ್ಯಕ್ರಮ ಮಾತ್ರವಲ್ಲದೆ ಸ್ಥಳೀಯ ಯುವ ಪ್ರತಿಭೆಗಳನ್ನು ಬೆಳಕಿಗೆ ತರುವ ಉದ್ದೇಶವಾಗಿದೆ. ಅಲ್ಲದೆ ಮನೋರಂಜನೆ, ಸಾಮಾಜಿಕ ಸಂದೇಶವನ್ನು ಯುವ ಜನರಿಗೆ ಮುಟ್ಟಿಸುವ ಕೆಲಸ ನಡೆಯಲಿದೆ ಎಂದು ತಿಳಿಸಿದ್ದಾರೆ.


ಸ್ಪರ್ಧಾ ಕಾರ್ಯಕ್ರಮಗಳು: ಯುವ ಕಲಾವಿದರ ಚಿತ್ರಾಕಲಾ ಸ್ಪರ್ಧೆಗೆ ಜಿಲ್ಲೆಯ ೨೦ ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮೊಬೈಲ್ ಛಾಯಾಗ್ರಹಣ ಸ್ಪರ್ಧೆಯಲ್ಲಿ ೨೦ ಜನರಿಗೆ ಅವಕಾಶ ಕಲ್ಪಿಸಲಾಗಿದೆ. ೨೦ ಯುವ ಬರಹಗಾರರಿಗೆ ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ಕವಿತೆ ರಚನೆ ಮಾಡುವ ಸ್ಪರ್ಧೆ ನಡೆಯಲಿದೆ. ಭಾಷಣ ಸ್ಪರ್ಧೆಗೆ ಸ್ಥಳದಲ್ಲೆ ವಿಷಯವನ್ನು ನೀಡಲಾಗುವುದು. ಸಾಂಸ್ಕೃತಿಕ ಉತ್ಸವ-ಜಾನಪದ ನೃತ್ಯ ಇದು ಗುಂಪು ಸ್ಪರ್ಧೆಯಾಗಿದ್ದು, ಜಿಲ್ಲೆಯ ೧೦ ತಂಡಗಳಿಗೆ ಅವಕಾಶ ಕಲ್ಪಿಸಲಾಗಿದೆ.


ಈ ಎಲ್ಲಾ ಸ್ಪರ್ಧಾ ಕಾರ್ಯಕ್ರಮದಲ್ಲಿ ಒಬ್ಬರಿಗೆ ಒಂದು ಕಾರ್ಯಕ್ರಮದಲ್ಲಿ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು, ಸಂಘಟಕರು ಮತ್ತು ತೀರ್ಪುಗಾರರ ತೀರ್ಮಾನವೇ ಅಂತಿಮ. ಭಾಗವಹಿಸುವ ಸ್ಪರ್ಧಾಳುಗಳು ಮಡಿಕೇರಿ ನೆಹರು ಯುವ ಕೇಂದ್ರದಿಂದ ನೇರವಾಗಿ ಅಥವಾ ವಾಟ್ಸಪ್ ಮುಖಾಂತರ ಕಡ್ಡಾಯವಾಗಿ ನೋಂದಾಣಿ ಮಾಡಬೇಕಾಗುತ್ತದೆ. ನೋಂದಾಣಿಗೊಂಡವರಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ನೋಂದಾವಣಿ ಮಾಡಲು ಸೆ.೪ ಕೊನೆಯ ದಿನವಾಗಿದ್ದು, ಇ-ಮೇಲ್ ಐಡಿ nykkodaguprogram@gmail.com ವಾಟ್ಸಪ್ ನಂಬರ್ ೯೫೯೧೩೦೩೬೦೪ಗೆ ಕಳುಗಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ೯೪೮೧೨೧೩೯೨೦, ೯೪೪೯೭೫೯೦೨೯, ೯೪೮೦೬೪೬೩೮೨ ಸಂಪರ್ಕಿಸಬಹುದಾಗಿದೆ ಎಂದು ಸುಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net