ವಿಶೇಷಚೇತನರ ಜಿಲ್ಲಾ ಮಟ್ಟದ ಪ್ರಸರಣ ಕಾರ್ಯಾಗಾರ

MDK04
Published on

ಮಡಿಕೇರಿ: ವಿಪತ್ತು ನಿರ್ವಹಣೆಯಲ್ಲಿ ವಿಶೇಷಚೇತನರ ಅವಶ್ಯಕತೆಗಳ ಅಳವಡಿಕೆ ಕುರಿತು ಜಿಲ್ಲಾ ಮಟ್ಟದ ಪ್ರಸರಣ ಕಾರ್ಯಾಗಾರ ಇತ್ತೀಚೆಗೆ ಮಡಿಕೇರಿಯ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.


ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಕೊಡಗು ಶಾಖೆ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೊಡಗು ಜಿಲ್ಲೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಕೊಡಗು ಜಿಲ್ಲೆ, ಮೆಕ್‌ಗಿಲ್ ವಿಶ್ವವಿದ್ಯಾನಿಲಯ ಕೆನಡಾ ಮತ್ತು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕೊಡಗು ಶಾಖೆ ಹಾಗೂ ಸಮುದಾಯದ ಸಹಭಾಗಿತ್ವದೊಂದಿಗೆ ಜಿಲ್ಲಾ ಮಟ್ಟದ ಪ್ರಸರಣ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.


ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಿಪತ್ತು ನಿರ್ವಹಣಾ ಪರಿಣಿ ಅನನ್ಯ ವಾಸುದೇವ್‌ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ೨೦೧೮ರಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿತ್ತು. ಈ ಸಂದರ್ಭ ವಿಪತ್ತು ಹಾಗೂ ಪ್ರವಾಹದ ಅನುಭವಗಳ ಕುರಿತಾದ ಮಾಹಿತಿ ಹಂಚಿಕೊಂಡರು. ೨೦೧೯ ಆಗಸ್ಟ್ ತಿಂಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದ ಅನುಭವ ಹಾಗೂ ವಿಪತ್ತು ನಿರ್ವಹಣೆ ಯೋಜನೆಗೆ ನಿಯೋಜನೆಗೊಂಡಿದ್ದ ಎನ್.ಡಿ.ಆರ್.ಎಫ್ ತಂಡಗಳ ಕಾರ್ಯವೈಕರಿಗಳ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ವ್ಯವಸ್ಥಾಪನ ಸಮಿತಿ ಸದಸ್ಯ ಕೆ.ಕೆ.ವಿಶ್ವನಾಥ್, ಪ್ರವಾಹದ ಸಂದರ್ಭದಲ್ಲಿ ವಿಶೇಷಚೇತನರು ಅನುಭವಿಸಿದ ಘಟನೆಯ ಕುರಿತು ಮಾಹಿತಿ ಪಡೆದುಕೊಂಡು ಅಧ್ಯಯನ ಮಾಡಿರುವುದು ಸಂತಸದ ವಿಷಯವಾಗಿದೆ ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ಸಭಾಪತಿಗಳಾದ ರವೀಂದ್ರ ರೈ, ಕೊಡಗು ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಯೋಜನಾ ಸಹಾಯಕ ರಾಜ್ ಕುಮಾರ್, ಸುಂಟಿಕೊಪ್ಪ ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ, ಕೆನಡಾ ಮೆಕ್‌ಗಿಲ್ ವಿಶ್ವವಿದ್ಯಾನಿಲಯದ ಮ್ಯಾಥ್ಯೂ ಸೀಮರ್ಡ್, ಕೊಡಗು ಜಿಲ್ಲಾ ವಿಶೇಷಚೇತನರ ಸಂಘದ ಅಧ್ಯಕ್ಷ ಮಹೇಶ್ವರ್, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಯ ಡಾ॥ ಎಂ.ಆರ್.ಸೀತಾರಾಂ, ಡಾ॥ ಶೃತಿ, ಕಾರ್ಯಕ್ರಮ ವ್ಯವಸ್ಥಾಪಕ ಅಂಕಾಚಾರಿ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net