ಕ್ರೀಡೆಯಿಂದ ಉತ್ತಮ ಜೀವನ ಶೈಲಿ: ಜಿಲ್ಲಾಧಿಕಾರಿ ಡಾ.ಕುಮಾರ ಅಭಿಮತ

District level Dasara sports meet Mandya
Published on

ಮಂಡ್ಯ: ಕ್ರೀಡೆ ಮನುಷ್ಯನ ಬದುಕಿನಲ್ಲಿ ಉತ್ತಮ ಜೀವನ ನಡೆಸಲು ಬೇಕಾಗಿರುವ ಅವಶ್ಯಕ ಚಟುವಟಿಕೆ. ಆದ್ದರಿಂದ ಪ್ರತಿದಿನ ಕ್ರೀಡೆ ಮತ್ತು ವ್ಯಾಯಾಮವನ್ನು ಅಳವಡಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ ನೀಡಿದರು.

ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೇರಾ ಯುವ ಭಾರತ್, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಜೀವನ ಶೈಲಿ ಮತ್ತು ಕ್ರಮವನ್ನು ಅಳವಡಿಸಿಕೊಳ್ಳಲು ಕ್ರೀಡೆ ಬಹಳಷ್ಟು ಸಹಕಾರಿ. ದೈಹಿಕ ಹಾಗೂ ಮಾನಸಿಕವಾಗಿ ಸಧೃಢರಾಗಿರಲು ಕ್ರೀಡೆ ಪರಿಣಾಮಕಾರಿ. ಯಾವ ಕ್ರೀಡೆಯಲ್ಲಿ ಆಸಕ್ತಿ ಇದೆಯೋ ಆ ಕ್ರೀಡೆಯನ್ನು ಮೈಗೂಡಿಸಿಕೊಳ್ಳಿ. ಗೆಲ್ಲುತ್ತೇವೆ ಎಂಬ ಮನೋಭಾವನೆಯಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಿ ಎಂದು ಹೇಳಿದರು. ಪ್ರತಿ ಕ್ರೀಡೆಗೂ ಸಹ ತನ್ನದೇ ಆದ ಮೌಲ್ಯವಿರುತ್ತದೆ. ಕ್ರೀಡೆಯಲ್ಲಿ ಮೌಲ್ಯಗಳನ್ನು ಪಾಲಿಸುವುದರ ಜತೆಗೆ ಜೀವನದಲ್ಲಿಯೂ ಅಳವಡಿಸಿಕೊಳ್ಳಬಹುದೆಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ನಾನು ಸಹ ಶಾಲಾ ಕಾಲೇಜು ದಿನಗಳಲ್ಲಿ ಕ್ರೀಡಾಪಟು. ಕ್ರೀಡೆಯಿಂದ ನನ್ನ ವೃತ್ತಿ ಜೀವನಕ್ಕೆ ಸಾಕಷ್ಟು ಅನುಕೂಲವಾಗಿದೆ. ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಆದರೆ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ಸೋಲಿನಿಂದ ಕಲಿಯುವ ಪಾಠಗಳು ಹೆಚ್ಚು ಇರುತ್ತದೆ. ಸೋಲನ್ನು ಸವಾಲಾಗಿ ಪರಿಗಣಿಸಿ. ಅದರಿಂದ ಇನ್ನೂ ಹೆಚ್ಚು ಸಾಧಿಸಲು ಅವಕಾಶವಿರುತ್ತದೆ. ಪ್ರತಿದಿನವೂ ಸಹ ಸೋಲು ಮತ್ತು ಗೆಲುವಿನಿಂದ ಕಲಿಯುವುದು ಬಹಳಷ್ಟಿದೆ. ಆದ್ದರಿಂದ ಭಾಗವಸಹಿಸುವಿಕೆ ಅತಿ ಮುಖ್ಯ ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಕ್ರೀಡಾ ಜ್ಯೋತಿ ಬೆಳಗಿಸುವ ಕ್ರೀಡಾಕೂಟಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ಓಂಪ್ರಕಾಶ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಲೋಕೇಶ್, ಮೇರಾ ಯುವ ಭಾರತ್ ಅಧಿಕಾರಿ ಶ್ರುತಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net