ಡಿ.13ರಂದು ಜಿಲ್ಲಾಮಟ್ಟದ ಖಾದ್ಯಗಳ ಪಾಕ ಸ್ಪರ್ಧೆ: ನಗರದಲ್ಲಿ ಕೃಷಿ ಇಲಾಖೆಯಿಂದ ಆಯೋಜನೆ

cooking pots clay
Published on

ಮಂಡ್ಯ: ಕೃಷಿ ಇಲಾಖೆ ವತಿಯಿಂದ ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2025ರ ಅಂಗವಾಗಿ ರಾಜ್ಯ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆಯ ಪೂರ್ವಭಾವಿಯಾಗಿ ಡಿ.13ರಂದು ಬೆಳಗ್ಗೆ 10ಗಂಟೆಗೆ ನಗರದ ಗಾಂಧಿಭವನದಲ್ಲಿ ಜಿಲ್ಲಾಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯ ಎಲ್ಲ ಸಾರ್ವಜನಿಕರು ಸಿಹಿ(ಸಿರಿಧಾನ್ಯ) ಖಾದ್ಯಗಳು, ಖಾರ (ಸಿರಿಧಾನ್ಯ), ಮರೆತು ಹೋದ (ಖಾದ್ಯಗಳು) ಸಸ್ಯಹಾರಿ ಖಾದ್ಯ ತಯಾರಿಸಲು ಅವಕಾಶವಿದೆ. ಸಿರಿಧಾನ್ಯಗಳಾದ ಜೋಳ, ರಾಗಿ, ನವಣೆ, ಸಜ್ಜೆ, ಹಾರಕ, ಬರಗು, ಊದಲು, ಕೊರಲೆ ಮತ್ತು ಸಾಮೆ ಧಾನ್ಯಗಳಿಂದ ಮಾತ್ರ ತಯಾರಿಸಲಾದ ಸಿಹಿ ಮತ್ತು ಖಾರ ಖಾದ್ಯ ಪ್ರದರ್ಶಿಸಬಹುದು.

ಪ್ರತಿ ಸ್ಪರ್ಧಿಗೆ ಒಂದೇ ಖಾದ್ಯ ವಿಭಾಗದಡಿ(ಸಿಹಿ ಅಥವಾ ಖಾರ ಅಥವಾ ಮರೆತು ಹೋದ ಖಾದ್ಯಗಳ) ಭಾಗವಹಿಸಲು ಅವಕಾಶವಿರುತ್ತದೆ. ಮನೆಯಲ್ಲಿಯೇ ತಯಾರಿಸಿದ ಸಿರಿಧಾನ್ಯ ಖಾದ್ಯಗಳನ್ನು ಪ್ರದರ್ಶಿಸಬಹುದು. ಬಳಸುವ ಸಾಮಗ್ರಿಗಳ ಮಾದರಿಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ತಯಾರಿಸಿದ ತಿನಿಸುಗಳ ಪ್ರದರ್ಶನ, ಬಳಸಿದ ಸಾಮಗ್ರಿ, ತೋರಿಕೆ, ರುಚಿ, ಸುವಾಸನೆಗಳ ಆಧಾರದ ಮೇಲೆ ಅಂತಿಮ ತೀರ್ಪು ಕೈಗೊಳ್ಳಲಾಗುವುದು.

ಜಿಲ್ಲಾಮಟ್ಟದ ಪ್ರತಿ ವಿಭಾಗದಡಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ಕ್ರಮವಾಗಿ ತಲಾ 5 ಸಾವಿರ ರೂ, 3 ಸಾವಿರ ರೂ ಹಾಗೂ 2 ಸಾವಿರ ರೂ ನೀಡಲಾಗುತ್ತದೆ. ಅಂತೆಯೇ ಪ್ರತಿ ವಿಭಾಗದಲ್ಲೂ ಪ್ರಥಮ ಬಹುಮಾನವನ್ನು ಪಡೆದ ಸ್ಪರ್ಧಿಯನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ಆಸಕ್ತರು ಡಿ.12ರೊಳಗೆ ತಮ್ಮ ಸಂಕ್ಷಿಪ್ತ ಮಾಹಿತಿಯೊಂದಿಗೆ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದು. ಅರ್ಜಿಯಲ್ಲಿ ನಮೂದಿಸಿದ ತಿನಿಸುಗಳನ್ನು ಮನೆಯಲ್ಲಿಯೇ ತಯಾರಿಸಿ ಡಿ.13ರಂದು ಪ್ರದರ್ಶಿಸಬಹುದು. ಮಾಹಿತಿಗೆ ಮೊ.ಸಂ 8277933611, 9535739394, 9980083269 ಮತ್ತು 9483593315 ಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net