ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ಅಂಗನವಾಡಿಗಳಲ್ಲಿ ಮೂಲ ಸೌಕರ್ಯಗಳನ್ನು ಪರಿಶೀಲಿಸಿ: ಜಿಪಂ ಸಿಇಓ ಸೂಚನೆ

raichur
raichur
Published on

ರಾಯಚೂರು ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಕಾಲ-ಕಾಲಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಅಂಗನವಾಡಿಯ ಕಾರ್ಯಕರ್ತರ ಹಾಜರಾತಿ, ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಬೇಕೆಂದು ಜಿಪಂ ಸಿಇಓ ಈಶ್ವರ ಕುಮಾರ್ ಕಾಂದೂ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಬಾಲ್ಯ ವಿವಾಹ ತಡೆಗಟ್ಟಲು ಅಗತ್ಯ ಕ್ರಮವಹಿಸಬೇಕು. 14 ರಿಂದ 18 ವರ್ಷದ ಯುವತಿಯರಿಗೆ ಕೌಶಲ ತರಬೇತಿ ನೀಡಿ ಉದ್ಯೋಗ ಅವಕಾಶ ಮಾಡಿದರೆ ಅನುಕೂಲವಾಗಲಿದ್ದು, ಈ ತರಬೇತಿ ಕಾರ್ಯಕ್ರಮದಡಿ ತಾಲೂಕು ಮಟ್ಟದಲ್ಲಿ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿ ಗ್ರಾಮೀಣ ನಿರುದ್ಯೋಗ ಯುವತಿಯರಿಗೆ ಉದ್ಯೋಗ ದೊರಕಿಸಬೇಕೆಂದರು.

ಜಿಲ್ಲೆಯಲ್ಲಿ ಬಾಲ್ಯ ವಿವಾಹ ಮತ್ತು ಪೋಕ್ಸೋ ಅಪರಾಧಗಳು ಕಂಡುಬಅದಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು. ಬಾಲ್ಯ ವಿವಾಹ ಮತ್ತು ಪೋಕ್ಸೋ ಪ್ರಕರಣಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಬೀದಿ ನಾಟಕಗಳು ಮತ್ತು ಜಾಗೃತ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜನೆ ಮಾಡಬೇಕು. ಬಾಲ್ಯ ವಿವಾಹಗಳ ಬಗ್ಗೆ ನಿಗಾವಹಿಸಿ ತಡೆಗಟ್ಟಲು ಮಾರ್ಗಸೂಚಿಗಳನ್ನು ರೂಪಿಸಬೇಕು. ಸಾರ್ವಜನಿಕರ ಸಹಕಾರ ಪಡೆದು ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿಯು ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನವೀನ್ ಕುಮಾರ್ ಮಾತನಾಡಿ, ಶಾಲಾ ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಗ್ರಾಮಗಳಲ್ಲಿಯೇ ಇರುವುದರಿಂದ ಬಾಲ್ಯ ವಿವಾಹಗಳ ಬಗ್ಗೆ ಪತ್ತೆ ಹಚ್ಚಿ ಕಾರ್ಯಪಡೆಗೆ ಸಕಾಲಕ್ಕೆ ಮಾಹಿತಿ ಒದಗಿಸಲು ಕಾಳಜಿ ವಹಿಸಬೇಕು ಎಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತಾಪಂ ಚಂದ್ರಶೇಖರ ಪವಾರ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ನಂದಿತಾ,ಡಿಡಿಪಿಐ ಡಾ.ಕೆ.ಡಿ.ಬಡಿಗೇರ, ಮಿಶನ್ ಶಕ್ತಿ ಯೋಜನೆಯ ನಿರ್ವಾಹಕ ಗಿರಿಜಾ, ಸಖಿ ಒನ್ ಕೇಂದ್ರ ರೀಮ್ಸ್ ಸಿಬ್ಬಂದಿ ಭಾಗ್ಯವತಿ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net