

ಮಂಡ್ಯ: ಜಿಲ್ಲೆಯ ಎಲ್ಲ ಶಾಲೆ ಮತ್ತು ಕಾಲೇಜು ತಂಬಾಕುಮುಕ್ತ ವಲಯವಾಗಿಸಿ ದೃಢೀಕರಣ ಪತ್ರ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ 4ನೇ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲ ಸರ್ಕಾರಿ ಕಚೇರಿಯನ್ನು ಸಹ ತಂಬಾಕು ಮುಕ್ತವಾಗಿಸಿ ದೃಢೀಕರಣ ಪತ್ರ ನೀಡಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಕನಿಷ್ಟ 100 ಶಾಲೆಯಲ್ಲಿ ತಂಬಾಕು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸುವ ಗುರಿ ಹೊಂದಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ 15,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನೊಳಗೊಂಡಂತೆ 302ಕ್ಕೂ ಹೆಚ್ಚು ತಂಬಾಕು ಜಾಗೃತಿ ಕಾರ್ಯಕ್ರಮಗಳು ಜರುಗಿವೆ. ಅಕ್ರಮವಾಗಿ ತಂಬಾಕು ಮಾರಾಟ ಮಾಡುತ್ತಿದ್ದ 118 ಕಡೆ ದಾಳಿ ನಡೆಸಿ 1,48,120 ರೂ ಮೊತ್ತದ ದಂಡ ವಿಧಿಸಲಾಗಿದೆ. ನಗರ ಮಟ್ಟದಲ್ಲಿ ನೂತನ ತಂಬಾಕು ಮಾರಾಟಗಾರರಿಗೆ ಪರವಾನಗಿ ನಿಯಮಗಳ ಮಾಹಿತಿ ನಗರಾಭಿವೃದ್ಧಿ ಇಲಾಖೆ ವತಿಯಿಂದ ನೀಡಲಾಗುವುದು ಎಂದು ತಿಳಿಸಿದರು.
ಶಾಲಾ ಮಟ್ಟದಲ್ಲಿ ಮಕ್ಕಳಿಂದ ಪಾಲಕರಿಗೆ ತಂಬಾಕು ಕುರಿತು ಜಾಗೃತಿ ಮೂಡಿಸುವ ಪತ್ರಗಳನ್ನು ಬರೆಸಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಪದವಿ ಪೂರ್ವ ಕಾಲೇಜುಗಳಲ್ಲಿ ತಂಬಾಕು ನಿಯಂತ್ರಣದ ಕುರಿತು ಫಲಕಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ನಗರಾಭಿವೃದ್ಧಿ ಇಲಾಖೆ ಕೋಶಾಧಿಕಾರಿ ಮಾಯಣ್ಣಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವರಾಮೇಗೌಡ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಚೆಲುವಯ್ಯ ಇತರರಿದ್ದರು.