ಹುಕ್ಕಾ ಬಾರ್‌ಗಳಿದ್ದರೆ ತೆರವುಗೊಳಿಸಿ: ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸೂಚನೆ

District level coordination committee meeting mandya
Published on

ಮಂಡ್ಯ: ಜಿಲ್ಲೆಯಲ್ಲಿ ಹುಕ್ಕಾ ಬಾರ್‌ಗಳಿದ್ದರೆ ಕೂಡಲೇ ತೆರವುಗೊಳಿಸಿ. ಮಾತ್ರವಲ್ಲದೆ ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವುದರ ಜತೆಗೆ ತಂಬಾಕು ಮತ್ತು ಹುಕ್ಕಾ ಮುಕ್ತ ವಲಯ ಮಾಡಿ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಂಬಾಕು ಮಾರಾಟ ಮಾಡುವ ಪ್ರದೇಶಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕಟ್ಟು ನಿಟ್ಟಿನ ಸರ್ಕಾರದ ನಿರ್ದೇಶನಗಳು ಪಾಲನೆ ಆಗಬೇಕು. ಇಲ್ಲವಾದಲ್ಲಿ ದಂಡ ವಿಧಿಸಿ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.

ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ, ಪಾಂಡವಪುರ ತಾಲೂಕು ಶೆಟ್ಟಿಹಳ್ಳಿ, ಮೇಲುಕೋಟೆ, ಶ್ರೀರಂಗಪಟ್ಟಣ ತಾಲೂಕು ನಗುವಿನಹಳ್ಳಿಗಳಲ್ಲಿ ತಂಬಾಕು ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ತಂಬಾಕು, ಹುಕ್ಕಾ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಈಗಾಗಲೇ ಜಿಲ್ಲೆಯ ಕೆಲ ಗ್ರಾಮ ಹಾಗೂ ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡು ತಂಬಾಕು ಮುಕ್ತ ವಲಯ ಮಾಡುವುದಕ್ಕೆ ಪ್ರೇರೇಪಿಸಲಾಗಿದೆ. ಶಿಕ್ಷಣ, ನಗರಾಭಿವೃದ್ಧಿ, ಪಂಚಾಯತ್ ರಾಜ್, ಸಾರಿಗೆ ಇಲಾಖೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಲಾಖೆಯೊಂದಿಗೆ ಕೈ ಜೋಡಿಸಿ ಕೋಟ್ಪಾ ಕಾರ್ಯಾಚರಣೆ ಹಮ್ಮಿಕೊಳ್ಳಬೇಕು. ಕೋಟ್ಪಾ ಕಾಯಿದೆಯಡಿ 2023 ಏಪ್ರಿಲ್ನಿಂದ 2024 ಜನವರಿವರೆಗೆ 75 ದಾಳಿ 1,20,360 ರೂ ದಂಡ ಸಂಗ್ರಹಿಸಲಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಮಾರ್, ಡಿಡಿಪಿಐ ಶಿವರಾಮೇಗೌಡ, ನಾಗಮಂಗಲ ಡಿವೈಎಸ್‌ಪಿ ಸುನೀಲ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಸಿ.ಬೆಟ್ಟಸ್ವಾಮಿ, ದಂತವೆದ್ಯ ಡಾ. ಅರುಣಾನಂದ, ಜಿಲ್ಲಾ ಸಂಯೋಜಕ ತಿಮ್ಮರಾಜು ಇತರರಿದ್ದರು.

ತಂಬಾಕು ನಿಯಂತ್ರಣದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅಂತೆಯೇ ತಂಬಾಕು ನಿಯಂತ್ರಣ ವಿಷಯ ಕುರಿತು ಸಭೆಯಲ್ಲಿ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net