

ಮಂಡ್ಯ: ಮೀನುಗಾರರು ಆರ್ಥಿಕ ಹಾಗೂ ಸಾಮಾಜಿಕವಾಗಿ ಸದೃಢರಾಗಲು ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಈಗಾಗಲೇ ಸಹಾಯಧನ ಪಡೆದವರು ಸಮರ್ಪಕವಾಗಿ ಬಳಸಿಕೊಳ್ಳುತ್ತಿರುವ ಮತ್ತು ಅವರ ಆರ್ಥಿಕ ಸ್ಥಿತಿ ಸುಧಾರಣೆಗೊಂಡಿರುವ ಕುರಿತು ಪರಿಶೀಲನೆ ನಡೆಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ಮೀನುಗಾರಿಕೆ ಇಲಾಖೆ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2025-26 ನೇ ಸಾಲಿನ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಕಳೆದ ಐದು ವರ್ಷದಿಂದ 742 ಫಲಾನುಭವಿಗಳಿದ್ದಾರೆ. ಈವರೆಗೆ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 150 ಫಲಾನುಭವಿಗೆ ಅಂದಾಜು 513.38 ಲಕ್ಷ ರೂ ಸಹಾಯಧನ ನೀಡಲಾಗಿದೆ. ಅಂತೆಯೇ ಮೀನುಗಾರರ ಎಫ್‌ಪಿಒಗಳನ್ನು ಹೆಚ್ಚಿಸಿ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 45 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಾರರಿದ್ದು, ಅವರ ಆರ್ಥಿಕ ಮಟ್ಟದ ಸುಧಾರಣೆಗಾಗಿ ಮೀನು ಸಾಕಾಣಿಕೆ ಕೌಶಲದ ಕುರಿತಾಗಿ ತರಬೇತಿ ನೀಡಿ. ಜಿಲ್ಲೆಯಲ್ಲಿ ಮೀನುಗಾರಿಕೆ ಇಲಾಖೆಯ 177 ಕೆರೆ ಹಾಗೂ ಗ್ರಾಮ ಪಂಚಾಯಿತಿಯ 688 ಕೆರೆಗಳು ಒಟ್ಟು 865 ಕೆರೆಗಳು ಹಾಗೂ 26 ನದಿ ಭಾಗಗಳು ಮೀನು ಸಾಕಾಣಿಕೆಗೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 2024-25 ನೇ ಸಾಲಿನ 383 ಲಕ್ಷ ಮೀನು ಮರಿ ಬಿತ್ತನೆ ಮಾಡಿ 30.579 ಟನ್ ಮೀನು ಉತ್ಪಾದನೆ ಮಾಡಲಾಗಿದೆ. ಜಿಲ್ಲೆಯಲ್ಲಿ 47 ಮೀನುಗಾರರ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲ ಮೀನುಗಾರರಿಗೆ ಮೀನುಗಾರಿಕೆ ಕುರಿತು ಹೆಚ್ಚಿನ ತರಬೇತಿ ನೀಡಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಮೀನು ಮಾರಾಟ ಕಿಯೋಸ್ಕ್‌ಗಳನ್ನು ಹೆಚ್ಚಿಸಿ. ಮೀನು ಸೇವನೆ ಆರೋಗ್ಯಕ್ಕೆ ಒಳ್ಳೆಯದೆಂದು ಸಾರ್ವಜನಿಕರಿಗೆ ಅರಿವು ಮೂಡಿಸಿ. ಎಫ್‌ಪಿಒ ಜತೆಗೂಡಿ ನಮ್ಮದೇ ಆದ ಸ್ಥಳೀಯ ಕೆ.ಆರ್.ಎಸ್ ಫಿಶ್ ಎಂದು ಬ್ರ್ಯಾಂಡಿಂಗ್ ಮಾಡಿ. ತಾಜಾ ಮೀನುಗಳನ್ನು ಸ್ವಚ್ಛ ಮತ್ತು ಕತ್ತರಿಸಿ ಉತ್ತಮವಾಗಿ ಪ್ಯಾಕಿಂಗ್ ಮಾಡಿ ಮಾರಾಟ ಮಾಡಿದರೆ ಶೇ.30ರಷ್ಟು ಆದಾಯ ಹೆಚ್ಚಿಸಬಹುದು. ಜಿಲ್ಲೆಯಲ್ಲಿ 3 ರಿಂದ 4 ಲೈವ್ ಫಿಶ್ ವೆಂಡಿಂಗ್ ಸೆಂಟರ್ ಸ್ಥಾಪನೆ ಮಾಡಿ. ಮಂಗಳೂರು ಉಡುಪಿಯಿಂದ ಮೀನುಗಳನ್ನು ಆಮದು ಮಾಡಿಕೊಳ್ಳಿ. ಮೀನು ಸಾಕಾಣಿಕೆಯ ಹೊಂಡ, ಕೆರೆ, ಕಟ್ಟೆ, ಜಲಾಶಯಗಳಲ್ಲಿ ಕಲುಷಿತ ನೀರು, ಡ್ರೈನೇಜ್ ನೀರು ಬಾರದಂತೆ ಸೂಕ್ತ ಕ್ರಮ ವಹಿಸಿ ಎಂದು ಸೂಚಿಸಿದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಬಾಬಾ ಸಾಬ್, ಸಹಾಯಕ ನಿರ್ದೇಶಕ ಕೆ.ಎಂ.ಲೋಕೇಶ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣ್‌ಕುಮಾರ್ ಇತರರಿದ್ದರು.