

ಉಡುಪಿ: ಮಕ್ಕಳ ಹಕ್ಕುಗಳ ರಕ್ಷಣೆ ಕಾಯಿದೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಮಕ್ಕಳ ಜೀವನ ಮಟ್ಟವನ್ನು ಉತ್ತಮಗೊಳಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ ಹೇಳಿದರು.
ಬುಧವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಮಕ್ಕಳ ರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ವ್ಯಾಪ್ತಿಯ ಅಂಗನವಾಡಿ, ಶಾಲೆ ಹಾಗೂ ವಸತಿ ನಿಲಯಗಳ ಆವರಣದಲ್ಲಿ ವಿದ್ಯುತ್ ಅವಘಡ ಸಂಭವಿಸುವ ಟ್ರಾನ್ಸ್ಫಾಮ್ರ್, ವಿದ್ಯುತ್ ತಂತಿಗಳು ಹಾದು ಹೋಗಿದ್ದಲ್ಲಿ ಅವುಗಳನ್ನು ಕೂಡಲೇ ಬದಲಾಯಿಸಬೇಕು ಎಂದರು. ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿರುವ ವಾಹನ ಚಾಲಕರ ವರದಿಯನ್ನು ನೀಡುವಂತೆ ಸೂಚಿಸಿದರು. ವಯಸ್ಕರಾಗದ ಅನೇಕ ಹೆಣ್ಣು ಮಕ್ಕಳು ಗರ್ಭಿಣಿಯರಾಗಿರುತ್ತಿರುವ ಕುರಿತು ಪ್ರಕರಣ ವರದಿಯಾಗುತ್ತಿವೆ. ಪ್ರಕರಣ ಗಮನಕ್ಕೆ ಬಂದ ತಕ್ಷಣ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಸೂಚಿಸಿದರು. 5 ಕಿ.ಮೀ ದೂರದಿಂದ ಶಾಲೆಗೆ ಬರುವ ಮಕ್ಕಳಿಗೆ ಪ್ರತಿ ತಿಂಗಳು 600 ರೂ. ನೀಡಲಾಗುತ್ತಿದ್ದು, ಇದರ ಸದುಪಯೋಗವನ್ನು ಮಕ್ಕಳು ಪಡೆಯುವಂತಾಗಬೇಕು. ಗ್ರಾಮ ಪಂಚಾಯಿತಿ ಅನುದಾನದಲ್ಲಿ ಶೇ. 2 ರಷ್ಟು ಮಕ್ಕಳಿಗೆ ಕ್ರೀಡಾ ಉಪಕರಣಗಳನ್ನು ಖರೀದಿಸಲು ಅವಕಾಶವಿದೆ. ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆಯನ್ನು ಪ್ರತ್ಯೇಕವಾಗಿ ಮಾಡಬೇಕು. ಕುಷ್ಠರೋಗ ಪೀಡಿತ ಮಕ್ಕಳ ಪಟ್ಟಿಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಸಲ್ಲಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ವಿದ್ಯಾಭ್ಯಾಸಕ್ಕಾಗಿ ಹೊರ ಜಿಲ್ಲೆಗಳ ಹೆಚ್ಚಿನ ಮಕ್ಕಳು ವಸತಿನಿಲಯಗಳಲ್ಲಿ ವಾಸವಿದ್ದು, ಅವರುಗಳಿಗೆ ವ್ಯವಸ್ಥಿತ ರೀತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ವಸತಿ ನಿಲಯದ ಮಕ್ಕಳಿಗೂ ಕ್ರೀಡಾ ಉಪಕರಣಗಳನ್ನು ಕಲ್ಪಿಸುವ ಕೆಲಸವಾಗಬೇಕು ಎಂದ ಅವರು, ವಸತಿ ನಿಲಯದ ಸಿಬ್ಬಂದಿಗಳು ವಿದ್ಯಾರ್ಥಿನಿಲಯಗಳ ಮಕ್ಕಳ ಜೊತೆಯಲ್ಲಿ ಸೌಹಾರ್ದತೆಯಿಂದ ವರ್ತಿಸಬೇಕು ಎಂದರು. ಜಿಲ್ಲೆಯಲ್ಲಿ ವಿವಿಧ ಕಾರಣಗಳಿಗೆ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯನ್ನು ಆದಷ್ಟು ಶೀಘ್ರವಾಗಿ ಮಾಡಬೇಕು. ಪೌರಕಾರ್ಮಿಕರ ಮಕ್ಕಳ ಸ್ಥಿತಿಗತಿಗಳ ವರದಿಯನ್ನು ನೀಡುವಂತೆ ಹಾಗೂ ಪೌರಕಾರ್ಮಿಕರ ಮಕ್ಕಳಿಗೆ ಬಾಲಕಾರ್ಮಿಕ, ಫೋಕ್ಸೊ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸುವಂತೆ ತಿಳಿಸಿದರು. ಜಿಲ್ಲೆಯಲ್ಲಿ ವಿಕಲಚೇತನರ ಗ್ರಾಮಸಭೆಯನ್ನು ನಿರಂತರವಾಗಿ ಆಯೋಜಿಸಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ಲಭ್ಯವಿರುವ ಶೇ. 5 ರ ಅನುದಾನವನ್ನು ವಿಕಲಚೇತನರಿಗೆ ಅಗತ್ಯ ಸಲಕರಣೆಯನ್ನು ಪೂರೈಸಲು ಬಳಸಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ 1522 ಅಂಗನವಾಡಿ ಕೇಂದ್ರಗಳಿದ್ದು, ಅವುಗಳಲ್ಲಿ 1051 ಸ್ವಂತ ಕಟ್ಟಡ, 31 ಬಾಡಿಗೆ ಕೇಂದ್ರದಲ್ಲಿ ಹಾಗೂ ಉಳಿದಂತೆ ಶಾಲೆಗಳ ಕಟ್ಟಡಗಳಲ್ಲಿ ನಡೆಯುತ್ತಿದೆ. ಸರ್ಕಾರಿ ಉದ್ದೇಶಗಳಿಗೆ ಅಗತ್ಯವಿರುವ ನಿವೇಶನಗಳನ್ನು ಗುರುತಿಸಿ ಅಂಗನವಾಡಿ ಕೇಂದ್ರ ನಿಮಾರ್ಣಕ್ಕೆ ಅವಕಾಶ ಕಲ್ಪಿಸಬೇಕು. ಬಾಡಿಗೆ ಕಟ್ಟಡ, ಸಮುದಾಯ ಭವನ, ಸರಕಾರಿ ಇಲಾಖೆಯ ಖಾಲಿ ಜಾಗಗಳಲ್ಲಿರುವ ಅಂಗನವಾಡಿಗಳಲ್ಲಿ ಸುರಕ್ಷತಾ ಕ್ರಮಗಳ ಕುರಿತು ಗಮನ ಹರಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಎಂ. ಪುರುಷೋತ್ತಮ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ ಗಡಾದ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಣಪತಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅನಿತಾ ಮಡ್ಲೂರು, ಪೌರಾಯುಕ್ತ ರಾಯಪ್ಪ ಮತ್ತಿತರರು ಉಪಸ್ಥಿತರಿದ್ದರು.