ಮಕ್ಕಳ ಹಕ್ಕು ರಕ್ಷಣೆಗಾಗಿ ಕಾಯ್ದೆ ಜಾರಿ: ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಾಣಿ ಎ.ಶೆಟ್ಟಿ ಹೇಳಿಕೆ

District Level Child Consultation Programme mandya
Published on

ಮಂಡ್ಯ: ಮಕ್ಕಳ ಹಕ್ಕುಗಳನ್ನು ಸಂರಕ್ಷಿಸುವ ಸಲುವಾಗಿ ಹಲವು ಕಾಯ್ದೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಾಣಿ ಎ.ಶೆಟ್ಟಿ ಹೇಳಿದರು.

ನಗರದ ಕಾರ್ಮೆಲಾ ಕಾನ್ವೆಂಟ್‌ನಲ್ಲಿ ಯೂನಿಸೆಫ್ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕ, ಶಾಲಾ ಮತ್ತು ಶಿಕ್ಷಣ ಸಾಕ್ಷರತಾ ಇಲಾಖೆ, ಬರ್ಡ್ಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಸಂಸತ್ ಹಾಗೂ ಜಿಲ್ಲಾ ಮಟ್ಟದ ಮಕ್ಕಳ ಸಮಾಲೋಚನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಮೇಲಿನ ದೌರ್ಜನ್ಯ, ಬಾಲ ಕಾರ್ಮಿಕ ಪದ್ಧತಿ, ಕಳ್ಳ ಸಾಗಾಣಿಕೆಯಿಂದಾಗಿ ಅವರ ಹಕ್ಕುಗಳಿಗೆ ಚ್ಯುತಿಯಾಗುತ್ತಿದೆ. ಕಾನೂನಿನಡಿ ಎಲ್ಲರೂ ಸಮಾನರು. ಮಕ್ಕಳೂ ಇದಕ್ಕೆ ಹೊರತಾಗಿಲ್ಲ. ಅವರಿಗೆ ಉಚಿತವಾಗಿ ಶಿಕ್ಷಣ, ಆರೋಗ್ಯ ನೀಡಬೇಕಾಗುತ್ತದೆ. ಇದನ್ನು ಪಡೆಯುವುದು ಮಕ್ಕಳ ಹಕ್ಕು. ಅದನ್ನು ನಡೆಸಿಕೊಡುವುದು ಪಾಲಕರ ಕರ್ತವ್ಯವಾಗಿದೆ ಎಂದು ವಿವರಿಸಿದರು.

ಬರ್ಡ್ಸ್ ಸಂಸ್ಥೆ ಅಧ್ಯಕ್ಷ ಮಿಕ್ಕೆರೆ ವೆಂಕಟೇಶ್ ಮಾತನಾಡಿ, ಮಕ್ಕಳು ತಮ್ಮ ಬಯಕೆಗಳ ಈಡೇರಿಕೆಗಾಗಿ ಕಾಯುವುದು ಸರಿಯಲ್ಲ. ಅದನ್ನು ಈಡೇರಿಸುವುದು ವಯಸ್ಕರ ಜವಾಬ್ದಾರಿಯಾಗಿದೆ. ಮಕ್ಕಳು ಬಹುದೊಡ್ಡ ಆಸ್ತಿ. ಅದನ್ನು ರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿ. ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಬೇಕು. ಈ ವಿಶ್ವಕ್ಕೆ ಒಳ್ಳೆಯ ಮಾನವರಾಗಲು, ಸಮಾಜಕ್ಕೆ ಬಂದು ಎಲ್ಲ ಕಷ್ಟಗಳನ್ನು ಅನುಭವಿಸಿ ಮೆಟ್ಟಿ ನಿಲ್ಲಬೇಕಾದರೆ ಮೊದಲು ಅವರಿಗೆ ಶಿಕ್ಷಣ ನೀಡಬೇಕು. ಶಿಕ್ಷಣ ಪಡೆದರೆ ಎಲ್ಲ ಸಮಸ್ಯೆಗಳನ್ನು ಅವರು ಎದುರಿಸುತ್ತಾರೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ರಾಜಮೂರ್ತಿ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್, ಡಿಡಿಪಿಐ ಎಚ್.ಎಸ್.ಶಿವರಾಮೇಗೌಡ, ಬಿಇಒಗಳಾದ ಮಹದೇವ, ಸೌಭಾಗ್ಯ, ಕಾರ್ಮೆಲ್ ಕಾನ್ವೆಂಟ್ ಶಾಲೆಯ ಮುಖ್ಯಶಿಕ್ಷಕಿ ಸಿಸ್ಟರ್ ಪೌಲ್ವಿನ್‌ರೋಸ್, ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಎಂ.ಆರ್.ಧರಣಿಕುಮಾರ್, ರಕ್ಷಣಾಧಿಕಾರಿ ರಾಜೇಂದ್ರ, ಕಾರ್ಯಕ್ರಮ ಸಂಯೋಜಕಿ ಶೋಭಾವತಿ, ಪವಿತ್ರಾ, ರಘು, ವಿಮಲಾ, ರವಿಚಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net