ಕ್ರೀಡೆ ಜನರನ್ನು ಬೆಸೆಯುವ ಮಾಧ್ಯಮ : ಉಮಾನಾಥ ರೈ ಮೇರಾವು ಅನಿಸಿಕೆ

handball
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಕ್ರೀಡೆಗಳು ಜನರನ್ನು ಬೆಸೆಯುವ ಉತ್ತಮ ಮಾಧ್ಯಮವಾಗಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಸಂದರ್ಭದಲ್ಲಿ ಕ್ರೀಡೆಗಳಲ್ಲಿ ತೊಡಗಿಕೊಂಡರೆ ಕ್ರೀಡಾಸ್ಫೂರ್ತಿಬೆಳೆದು ಜೀವನೋತ್ಸಾಹ ತರುತ್ತದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು ಹೇಳಿದರು.

ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಬಂಟ್ವಾಳದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ಮತ್ತು ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾಗಿರಿ, ಬಂಟ್ವಾಳ ಸಂಯುಕ್ತಾಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕ-ಬಾಲಕಿಯರ ಹ್ಯಾಂಡ್‌ಬಾಲ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.

ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ ಪ್ರಾಂಶುಪಾಲ ಡಾ.ಸುಯೋಗ ವರ್ಧನ್ ಡಿ.ಎಂ.ಅಧ್ಯಕ್ಷತೆ ವಹಿಸಿದ್ದರು. ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ಶಿವಪ್ರಸಾದ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವ ಪ್ರಸಾದ್ ಶೆಟ್ಟಿ, ತಾಲೂಕು ಅಧ್ಯಕ್ಷ ಜಯರಾಮ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಪಾಧ್ಯಕ್ಷ ಜಗದೀಶ್ ರೈ, ಕರ್ನಾಟಕ ರಾಜ್ಯ ಹ್ಯಾಂಡ್ ಬಾಲ್ ಅಸೋಸಿಯೇಶನ್ ಜೊತೆ ಕಾರ್ಯದರ್ಶಿ ಹೇಮೋದರ್ ಉಪಸ್ಥಿತರಿದ್ದರು.

ಶಾಲಾ ಮುಖ್ಯಶಿಕ್ಷಕ ಹರಿಪ್ರಸಾದ್ ಸ್ವಾಗತಿಸಿ, ಚೈತ್ರ ಶೆಟ್ಟಿ ನಿರೂಪಿಸಿದರು. ದೈಹಿಕ ಶಿಕ್ಷಣದ ಮೇಲ್ವಿಚಾರಕ ಮಹೇಶ್ ಶೆಟ್ಟಿ ವಂದಿಸಿದರು. ವಿಜೇತ ತಂಡಕ್ಕೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ನೀಡಿ ಗೌರವಿಸಲಾಯಿತು.

ಬಹುಮಾನ ವಿವರ

ದಕ್ಷಿಣ ಕನ್ನಡ ಜಿಲ್ಲೆಯ 7 ತಾಲೂಕುಗಳಿಂದ ಒಟ್ಟು 28 ಕ್ರೀಡಾ ತಂಡಗಳು ಭಾಗವಹಿಸಿದ್ದು, ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಸೇಂಟ್ ಅಲೋಶಿಯಸ್ ಆಂಗ್ಲಮಾಧ್ಯಮ ಶಾಲೆ ಉರ್ವ ಪ್ರಥಮ ಸ್ಥಾನ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉಚ್ಚಿಲಗುಡ್ಡೆ ದ್ವಿತೀಯ ಸ್ಥಾನ ಪಡೆದುಕೊಂಡಿತು. ಪ್ರಾಥಮಿಕ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಭಾರತಿ ಆಂಗ್ಲ ಮಾಧ್ಯಮ ಶಾಲೆ, ಉಳ್ಳಾಲ ಹಾಗೂ ದ್ವಿತೀಯ ಸ್ಥಾನವನ್ನು ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಬಂಟ್ವಾಳ ಪಡೆದುಕೊಂಡಿತು. ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಬಂಟ್ವಾಳ ಪ್ರಥಮ ಸ್ಥಾನ ಹಾಗೂ ಭಾರತಿ ಆಂಗ್ಲ ಮಾಧ್ಯಮ ಶಾಲೆ ಉಳ್ಳಾಲ ದ್ವಿತೀಯ ಸ್ಥಾನ ಪಡೆದುಕೊಂಡಿತು. ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಸೇಂಟ್ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆ ಉರ್ವ ಪ್ರಥಮ ಸ್ಥಾನ ಹಾಗೂ ಭಾರತಿ ಆಂಗ್ಲ ಮಾಧ್ಯಮ ಶಾಲೆ ಉಳ್ಳಾಲ ದ್ವಿತೀಯ ಸ್ಥಾನ ಪಡೆದುಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net