ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಕಲ್ಯಾಣ ಕರ್ನಾಟಕ ಶಿಕ್ಷಣ ಅಭಿವೃದ್ದಿಗೆ ಸರ್ಕಾರ ಬದ್ದ-ಸಚಿವ ಎನ್‌ಎಸ್‌ಬಿ

raichur
raichur
Published on

ರಾಯಚೂರು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಸಾವಿರಾರು ಕೋಟಿ ರೂ.ಗಳನ್ನು ಪ್ರತಿ ವರ್ಷ ನೀಡುತ್ತದೆ. ಈ ಅನುದಾನ ಬಳಸಿಕೊಂಡು ಈ ಭಾಗದ ಶಿಕ್ಷಣ ಮತ್ತು ಆರೋಗ್ಯದ ಅಭಿವೃದ್ಧಿ ಹಾಗೂ ಶಿಕ್ಷಕರ ಕೊರತೆಗಳನ್ನು ನೀಗಿಸಲು, ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಬದ್ಧವಾಗಿದೆಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ನಿಮಿತ್ತ ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಾನಾ ದೇಶಗಳೊಂದಿಗೆ ಸ್ಪರ್ಧೆ ಮಾಡಲು ನಮಗೆ ಶಿಕ್ಷಣವು ತುಂಬಾ ಅವಶ್ಯಕವಾಗಿದೆ. ಈ ದಿಶೆಯಲ್ಲಿ ಯೋಚಿಸಿದಾಗ ನಿರಂತರವಾಗಿ ಮಕ್ಕಳ ಕಲಿಕೆಯಲ್ಲಿ ತೊಡಗುವ ಶಿಕ್ಷಕ ಸಮೂಹದ ಶ್ರಮ ಶ್ಲಾಘನೀಯವಾಗಿದೆ.

ಸರ್ವಪಲ್ಲಿ ರಾಧಕೃಷ್ಣನ್ ಅವರು ಈ ನಾಡು ಕಂಡ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದಾರೆ. ಅವರ ಆಚಾರ, ವಿಚಾರ ಮತ್ತು ಅವರ ಸಂದೇಶಗಳನ್ನು ಪಾಲಿಸುವ ಮೂಲಕ ಉತ್ತಮವಾದ ಭವಿಷ್ಯ ರೂಪಿಸಬೇಕಿದೆ. ನಾನಾ ಸವಾಲುಗಳು ಹಾಗೂ ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆಯೂ ಶಿಕ್ಷಕರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿಭಾಯಿಸುತ್ತಿರುವುದು ಪ್ರಶಂಶನೀಯ ಕಾರ್ಯವಾಗಿದೆ ಎಂದರು.

ಇಂದಿಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿನ ಕೆಲ ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯಗಳು ಸೇರಿದಂತೆ ನಾನಾ ಮೂಲಭೂತ ಸೌಕರ್ಯದ ಕೊರತೆ ಇರುವುದರ ಬಗ್ಗೆ ಇತ್ತೀಚೆಗೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆಯಾಗಿದೆ. ಈ ಸಮಸ್ಯೆ ಬಗೆಹರಿಸಲು ರಾಜ್ಯದ ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದರು. ಈ ಭಾಗದಲ್ಲಿ ಶಿಕ್ಷಕರ ನೇಮಕಾತಿ, ಮುಂಬಡ್ತಿ, ವೇತನ ಸೇರಿದಂತೆ ಶಿಕ್ಷಕರ ಮತ್ತು ಸಾರ್ವಜನಿಕರ ಬೇಡಿಕೆಗಳಿಗೆ ರಾಜ್ಯ ಸರ್ಕಾರವು ಹಂತ-ಹಂತವಾಗಿ ಸ್ಪಂದಿಸುತ್ತಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ ನಗರ ಶಾಸಕ ಡಾ.ಎಸ್.ಶಿವರಾಜ ಪಾಟೀಲ್ ಮಾತನಾಡಿ, ಶಿಕ್ಷಕರು ಕಣ್ಣಿಗೆ ಕಾಣುವ ದೇವರಿದ್ದಂತೆ ಎಂದು ಅವರ ಕಾರ್ಯಸಾಧನೆಯನ್ನು ಬಣ್ಣಸಿದರು. ಶಿಕ್ಷಕರು ದಿನ ನಿತ್ಯ ಒಂದಿಲ್ಲೊಂದು ಕಾರ್ಯದೊತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಕಾರ್ಯಭಾರದ ಹೊರೆಯನ್ನು ಕಡಿಮೆ ಮಾಡಿದರೆ ಮಾತ್ರ ಶಿಕ್ಷಕರಿಂದ ಗುಣಮಟ್ಟದ ಕಲಿಕೆಯನ್ನು ನಿರೀಕ್ಷೆ ಮಾಡಬಹುದಾಗಿದೆ. ಜಿಲ್ಲೆಯಲ್ಲಿ ಗುರುಭವನ ನಿರ್ಮಾಣಕ್ಕಾಗಿ ಈಗಾಗಲೇ ಅನುದಾನ ಮೀಸಲಿರಿಸಲಾಗಿದೆ. ಜಾಗದ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.

ಸಾಹಿತಿ ರಮೇಶಬಾಬು ಯಾಳಗಿ ಅವರು ಉಪನ್ಯಾಸ ನೀಡಿದರು.

ನಂತರ ಶಾಲಾ ಶಿಕ್ಷಣ ಇಲಾಖೆಯಿಂದ 2025-26ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ವಿವಿಧ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಪಾಲಿಕೆ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ,ಡಿಡಿಪಿಐ ಡಾ. ಕೆ.ಡಿ.ಬಡಿಗೇರ, ಸಹಕಾರ ಸಂಘದ ಅಧ್ಯಕ್ಷ ಜಯಂತರಾವ್ ಪತಂಗೆ,ಬಿಇಓ ಈರಣ್ಣ ಕೊಸಗಿ,ಜಿ.ಶಿವಮೂರ್ತಿ ಸೇರಿದಂತೆ ವಿವಿಧ ಶಾಲೆಗಳ ಮುಖ್ಯಗುರುಗಳು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net