ಹೆಣ್ಣುಭ್ರೂಣ ಹತ್ಯೆಗೆ ಕಡಿವಾಣ ಅಗತ್ಯ

udp-8-pratap
Published on

ಉಡುಪಿ: ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಮಾಡಿ, ಹೆಣ್ಣು ಭ್ರೂಣ ಹತ್ಯೆ ಮಾಡುವುದರಿಂದ ಸಮಾಜದಲ್ಲಿ ಲಿಂಗಾನುಪಾತದಲ್ಲಿ ವ್ಯತ್ಯಾಸ ಉಂಟಾಗಿ ಅಸಮತೋಲನವಾಗಿ ಸಮಸ್ಯೆಗಳು ಉಂಟಾಗುತ್ತವೆ. ಇವುಗಳಿಗೆ ಕಡಿವಾಣ ಹಾಕಬೇಕು ಎಂದು ಜಿಲ್ಲಾ ಮಟ್ಟದ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆ ಸಲಹಾ ಸಮಿತಿ ಅಧ್ಯಕ್ಷ ಡಾ. ಪ್ರತಾಪ್​ ಕುಮಾರ್​ ಹೇಳಿದರು.

ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇತ್ತೀಚೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಮಾಡುತ್ತಿರುವ ಪ್ರಕರಣಗಳು ಕೇಳಿ ಬರುತ್ತಿವೆ. ಜಿಲ್ಲೆಯಲ್ಲಿ ಈ ರೀತಿಯ ಪ್ರಕರಣಗಳು ಎಲ್ಲಿಯೂ ನಡೆಯದಂತೆ ನೋಡಿಕೊಳ್ಳಲು ಜಿಲ್ಲಾ ಸಮಿತಿಯು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು ಎಂದರು. ಭ್ರೂಣಲಿಂಗ ಪತ್ತೆ ಮಾಡುವುದು ಹಾಗೂ ಹೆಣ್ಣು ಭ್ರೂಣ ಹತ್ಯೆ ಮಾಡುವುದು ಜಿಲ್ಲೆಯ ಯಾವುದೇ ವೈದ್ಯಕಿಯ ಸಂಸ್ಥೆಗಳ ನರ್ಸಿಂಗ್​ ಹೋಮ್​ಗಳಲ್ಲಿ ಅಥವಾ ಸ್ಕಾ$ನಿಂಗ್​ ಸೆಂಟರ್​ಗಳಲ್ಲಿ ಕಂಡುಬಂದಲ್ಲಿ ಸಾರ್ವಜನಿಕರು ಜಿಲ್ಲಾ ಮಟ್ಟದ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆ ಸಲಹಾ ಸಮಿತಿಗೆ ಮಾಹಿತಿ ನೀಡಬೇಕು. ಪ್ರಕರಣ ಸಾಬೀತಾದಲ್ಲಿ ಮಾಹಿತಿದಾರರಿಗೆ 1 ಲಕ್ಷ ರೂ. ವರೆಗೆ ನಗದು ಪ್ರೋತ್ಸಾಹ ಬಹುಮಾನವನ್ನು ನೀಡಲಾಗುವುದು ಎಂದರು.

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಲಿಂಗಾನುಪಾತ 968 ಅನುಪಾತವಿದ್ದು, ಲಿಂಗಾನುಪಾತ ಅಸಮತೋಲನ ಬಗ್ಗೆ ತಜ್ಞ ವೈದ್ಯರು ಪರಾಮರ್ಶಿಸಿ, ವರದಿಯನ್ನು ಜಿಲ್ಲಾ ಮಟ್ಟದ ಪಿ.ಸಿ.ಪಿ.ಎನ್​.ಡಿ.ಟಿ ಸಮಿತಿಗೆ ನೀಡಬೇಕು ಎಂದರು. ಗರ್ಭಿಣಿಯರಿಗೆ ಸ್ಕಾ$ನಿಂಗ್​ ಮಾಡುವ ಮುನ್ನ ತಾಯಿ ಕಾರ್ಡ್​ ಪಡೆದಿರುವ ಬಗ್ಗೆ ಪರಿಶೀಲಿಸಬೇಕು. ಪಡೆಯದೇ ಇದ್ದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಪಡೆದುಕೊಳ್ಳುವಂತೆ ತಿಳಿಸಬೇಕು. ಸ್ಕಾ$ನಿಂಗ್​ ಸೆಂಟರ್​ಗಳಲ್ಲಿ ಮೊಬೈಲ್​ಗಳನ್ನು ಕೊಂಡೊಯ್ಯುವುದು ಕಡ್ಡಾಯವಾಗಿ ನಿಷೇಧಿಸಬೇಕು. ಭ್ರೂಣಲಿಂಗ ಪತ್ತೆ ಮಾಡುವ ವೈದ್ಯಾಧಿಕಾರಿಗಳು ಹಾಗೂ ಸೆಂಟರ್​ಗಳ ಮಾಲೀಕರಿಗೆ ಹತ್ತು ಸಾವಿರ ರೂ. ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು. ಇದೇ ಅಪರಾಧ ಪುನರಾವರ್ತನೆಯಾದಲ್ಲಿ ಐವತ್ತು ಸಾವಿರ ರೂ. ದಂಡದೊಂದಿಗೆ 5 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮರಾವ್​, ಮಣಿಪಾಲ ಕೆ.ಎಂ.ಸಿ ಯ ಮಕ್ಕಳ ತಜ್ಞ ಡಾ. ಕಿರಣ ಹೆಬ್ಬಾರ್​, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್​ ಬಿ, ಡಾ. ಆಮ್ನಾ ಹೆಗ್ಡೆ, ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ದೀಕ್ಷಿತಾ, ಕಾರ್ಕಳ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅನಿತಾ ಪ್ರಭು ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net