

ಮಂಡ್ಯ: ರೈತರು ತಾವು ಪಡೆದ ಸಾಲವನ್ನು ಒಮ್ಮೆಲೇ ಪಾವತಿ(ಒನ್ ಟೈಂ ಸೆಟಲ್ಮೆಂಟ್) ಮಾಡುವ ಸಂದರ್ಭದಲ್ಲಿ ಬ್ಯಾಂಕುಗಳು ಸೂಕ್ತ ಮಾರ್ಗದರ್ಶನ ಮಾಡಬೇಕು. ಮಾತ್ರವಲ್ಲದೆ ಪುನಃ ಸಾಲ ನೀಡಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೂಚಿಸಿದರು.
ನಗರದ ಬ್ಯಾಂಕ್ ಆಫ್ ಬರೋಡಾ ಸಂಸ್ಥೆಯ ಆರ್‌ಸೆಟಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಸಲಹಾ ಸಮಿತಿ ಮತ್ತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಆನ್‌ಲೈನ್ ಮೂಲಕ ಭಾಗಿಯಾಗಿ ಮಾತನಾಡಿದ ಅವರು, ವಿವಿಧ ಉದ್ದೇಶಗಳಿಗೆ ರೈತರು ಪಡೆಯುವ ಸಾಲಗಳಿಗೆ ಬಡ್ಡಿ ಜಾಸ್ತಿ ಎನ್ನುವ ದೂರುಗಳು ಬರುತ್ತಿವೆ. ಈ ಹಿನ್ನಲೆಯಲ್ಲಿ ಅವರು ಏಕಕಾಲಕ್ಕೆ ತಮ್ಮ ಸಾಲವನ್ನು ಪಾವತಿ ಮಾಡಲು ಮುಂದಾಗುತ್ತಿದ್ದಾರೆ. ಅಂತಹ ರೈತರಿಗೆ ಬ್ಯಾಂಕ್‌ಗಳು ಸಹಕರಿಸಬೇಕು ಎಂದು ಹೇಳಿದರು.
ಕೃಷಿಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅವರ ಸಾಲದ ಬಡ್ಡಿ ಹೆಚ್ಚಾಗಿದೆ ಎಂದು ದಿನವೂ ದೂರು ಬರುತ್ತಿವೆ. ಅದಕ್ಕಾಗಿಯೇ ಅವರು ಒಂದೇ ಬಾರಿಗೆ ಹಣ ಪಾವತಿ ಮಾಡಲು ಶ್ರಮಿಸುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ಬ್ಯಾಂಕುಗಳು ಸೌಜನ್ಯದಿಂದ ವರ್ತಿಸಬೇಕು. ರೈತರ ವಿಷಯದಲ್ಲಿ ಯಾವುದೇ ಕಾರಣಕ್ಕೂ ಕಠಿಣವಾಗಿ ನಡೆದುಕೊಳ್ಳಬೇಡಿ ಎಂದು ಸ್ಪಷ್ಟ ಸೂಚನೆ ಕೊಟ್ಟರು.
ಪ್ರಧಾನಮಂತ್ರಿ ನರೇಂದ್ರಮೋದಿ ಅವರ ನೇತೃತ್ವದಲ್ಲಿ ಅನೇಕ ಯೋಜನೆಗಳ ಮೂಲಕ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಆಗುತ್ತಿದೆ. ಅವರ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಯೋಜನೆಗಳ ಸೌಲಭ್ಯಗಳನ್ನು ತಲುಪಿಸುವ ಕೆಲಸವನ್ನು ಬ್ಯಾಂಕುಗಳು ಉತ್ತಮವಾಗಿ ಮಾಡುತ್ತಿವೆ. ಯುವಕರು, ಮಹಿಳೆಯರು, ಕೃಷಿಕರು ಕೇಂದ್ರದ ಯೋಜನೆಗಳ ಸೌಲಭ್ಯ ಪಡೆಯಲು ಬ್ಯಾಂಕುಗಳು ಸೇತುವೆಯಾಗಿವೆ. ಇದು ಮತ್ತಷ್ಟು ವಿಸ್ತೃತವಾಗಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ(ಲೀಡ್ ಬ್ಯಾಂಕ್) ವ್ಯವಸ್ಥಾಪಕ ಎನ್.ಅರುಣ್‌ಕುಮಾರ್, ನಬಾರ್ಡ್‌ನ ಎಡಿಎಂ ಹರ್ಷಿತಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಬ್ಯಾಂಕಿನ ವ್ಯವಸ್ಥಾಪಕರು ಹಾಜರಿದ್ದರು. ಇದೇ ವೇಳೆ ವಾರ್ಷಿಕ ಆರ್ಥಿಕ ಕ್ರೆಡಿಟ್ ವರದಿ ಬಿಡುಗಡೆ ಮಾಡಲಾಯಿತು.