

ಉಡುಪಿ: ವ್ಯಕ್ತಿಯನ್ನು ಗುರುತಿಸುವುದು ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಆಧಾರ್ ಕಡ್ಡಾಯವಾಗಿದ್ದು, 10 ವರ್ಷ ಹಳೆಯ ಕಾರ್ಡ್ ನವೀಕರಿಸಿ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.
ಗುರುವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಆಧಾರ್ ಮಾನಿಟರಿಂಗ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಈವರೆಗೆ 14,12,357 ಜನರು ಆಧಾರ್ ನೋಂದಣಿ ಮಾಡಿಕೊಂಡಿದ್ದಾರೆ. ಅವರಲ್ಲಿ 5 ವರ್ಷದೊಳಗಿನ 37,700, 5 ರಿಂದ 18 ವರ್ಷದವರು 2,06,567, 18 ವರ್ಷ ಮೇಲ್ಪಟ್ಟ 11,73,090 ಜನರಿದ್ದಾರೆ. 5 ವರ್ಷದೊಳಗಿನ ಮಕ್ಕಳು ಹೊಸದಾಗಿ ಆಧಾರ್ ಕಾರ್ಡ್ ನೊಂದಣಿಯನ್ನು ಸಮೀಪದ ಅಂಚೆ ಕಚೇರಿ, ತಾಲೂಕು ಕಚೇರಿ ಅಥವಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ಇದರ ಸದುಪಯೋಗವನ್ನು ಅವಶ್ಯ ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದರು.
ನವೀಕರಿಸದೆ ಇದ್ದಲ್ಲಿ ಆಧಾರ್ ಕಾರ್ಡ್ ನಿಷ್ಕ್ರೀಯಗೊಳ್ಳುತ್ತದೆ. ಇದರಿಂದ ಸರ್ಕಾರಿ ಸೌಲಭ್ಯ ಅಥವಾ ಸೇವೆ ಪಡೆಯಲು ಅನಾನುಕೂಲವಾಗುತ್ತದೆ. 15 ವರ್ಷದ ನಂತರ ಕಡ್ಡಾಯವಾಗಿ ಆಧಾರ್ ಬಯೋಮೆಟ್ರಿಕ್ ನವೀಕರಣ ಮಾಡಿಸಿಕೊಳ್ಳಬೇಕು. ಇದು ಕಡ್ಡಾಯವಾಗಿದೆ. ಜಿಲ್ಲೆಯಲ್ಲಿ 43,437 ಮಂದಿ 5 ವರ್ಷ ಮೇಲ್ಪಟ್ಟವರು, 44,481 ಜನ 15 ವರ್ಷ ಮೇಲ್ಪಟ್ಟವರು ಸೇರಿದಂತೆ ಒಟ್ಟು 87,918 ಜನರು ನವೀಕರಿಕೊಳ್ಳಲು ಬಾಕಿ ಇದೆ ಎಂದರು.
ರಾಜ್ಯ ಆಧಾರ್ ನೋಂದಣಿ ಪ್ರಾಧಿಕಾರವು ಜಿಲ್ಲೆಯ ಆಯ್ದ ಬ್ಯಾಂಕ್ಗಳು, ಅಂಚೆ ಕಚೇರಿಗಳಲ್ಲಿ ಆಧಾರ್ ನೋಂದಣಿ ಕೇಂದ್ರಗಳನ್ನು ತೆರೆಯಲು ಅದೇಶಿಸಿದ್ದು, ಅದರಂತೆ ಪ್ರತಿಯೊಂದು ಆಧಾರ್ ನೋಂದಣಿ ಕೇಂದ್ರವನ್ನು ಸೂಚಿಸಿದ ಕಚೇರಿ ಸಮಯದಲ್ಲಿ ತೆರೆದು ಸಾರ್ವಜನಿಕರಿಗೆ ಆಧಾರ್ ಸೇವೆ ಪಡೆಯಲು ಅನುವು ಮಾಡಿ ಕೊಡಬೇಕು ಎಂದರು.
ಆಧಾರ್ ಕಾರ್ಡ್ ಹೊಂದಿದವರು ಮರಣ ಹೊಂದಿದ್ದಲ್ಲಿ ಕಾನೂನು ಬದ್ಧ ವಾರಾಸುದಾರರು ಅವರ ಮರಣ ಪ್ರಮಾಣ ಪತ್ರವನ್ನು ನೀಡಿ, ಆಧಾರ್ ಕಾರ್ಡ್ ತಪ್ಪದೇ ರದ್ದುಪಡಿಸಬೇಕು. ರದ್ದುಪಡಿಸದೇ ಇದ್ದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಇದರ ಉಪಯೋಗ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಈ ರೀತಿ ಆದಲ್ಲಿ ವಾರಸುದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಯು.ಐ.ಡಿ.ಎ.ಐ ಡೈರೆಕ್ಟರ್ ಮನೋಜ್ ಕುಮಾರ್, ಯು.ಐ.ಡಿ.ಎ.ಐ ಅಸಿಸ್ಟೆಂಟ್ ಮ್ಯಾನೇಜರ್ ಮೊಹಮ್ಮದ್ ಮೂಸಾಬ್, ರಿಕೇಶ್, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಎಎಸ್ಪಿ ಸಿದ್ಧಲಿಂಗಪ್ಪ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಡಿಡಿಪಿಯು ಗಣಪತಿ, ಡಿಡಿಪಿಐ ಮಾರುತಿ, ಐ.ಟಿ.ಡಿ.ಪಿ ಯೋಜನಾ ಸಮನ್ಯಾಧಿಕಾರಿ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.