ಹಿರ್ಗಾನದಲ್ಲಿ ರಾಷ್ಟ್ರೀಕೃತ ಬ್ಯಾಂಕ್​ ಶಾಖೆ ಪ್ರಾರಂಭಿಸಲು ಸೂಚನೆ

udp-4-lead bank
Published on

ಉಡುಪಿ: ಜನಸಾಮಾನ್ಯರು ದೈನಂದಿನ ವ್ಯವಹಾರಗಳಿಗೆ ಬ್ಯಾಂಕ್​ಗಳಿಗೆ ಬಂದಾಗ ಅಧಿಕಾರಿ ಹಾಗೂ ಸಿಬ್ಬಂದಿಸ್ಥಳಿಯ ಭಾಷೆಯಲ್ಲಿ ವ್ಯವಹರಿಸಿ ಸೇವೆ ನೀಡಬೇಕು. ಹಿರ್ಗಾನದಲ್ಲಿ ಯಾವುದೇ ರಾಷ್ಟ್ರೀಕೃತ ಬ್ಯಾಂಕ್​ಗಳ ಶಾಖೆ ಹೊಂದಿಲ್ಲ. ಹೀಗಾಗಿ ಅಸಕ್ತ ಬ್ಯಾಂಕ್​ಗಳು ಶ್ರೀದಲ್ಲಿ ಶಾಖೆ ಪ್ರಾರಂಭಿಸಲು ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್​ ಬಾಯಲ್​ ಸೂಚನೆ ನೀಡಿದರು.

ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಲೀಡ್​ ಬ್ಯಾಂಕ್​ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬ್ಯಾಂಕುಗಳು ರಿಸರ್ವ್​ ಬ್ಯಾಂಕ್​ ನಿರ್ದೇಶನದನ್ವಯ ಸಿ.ಡಿ ಅನುಪಾತವನ್ನು ಹೆಚ್ಚುವಂತೆ ಎಲ್ಲಾ ಬ್ಯಾಂಕ್​ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಕೆಲವು ಬ್ಯಾಂಕ್​ಗಳಲ್ಲಿ ಸಿ.ಡಿ. ಅನುಪಾತವು ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಸುಧಾರಣೆ ಆಗಬೇಕು ಎಂದರು.

ಜಿಲ್ಲೆಯ ಉದ್ಯಮಿಗಳಿಗೆ ಜೀವನೋಪಾಯದ ಚಟುವಟಿಕೆಗಳನ್ನು ನಿರ್ಮಿಸಲು ಹಾಗೂ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಉದ್ಯೋಗ ಸೃಜನಾ ಯೋಜನೆಯಡಿ 131 ಫಲಾನುಭವಿಗಳಿಗೆ, 40.15 ಕೋಟಿ ರೂ. ಸಾಲ ವಿತರಿಸಲಾಗಿದೆ. ಪಿ.ಎಂ.ಇ.ಜಿ.ಪಿ ಯೋಜನೆಯಡಿ ಸ್ವೀಕೃತವಾದ ಎಲ್ಲಾ ಅರ್ಜಿಗಳನ್ನು ಆದ್ಯತೆಯ ಮೇಲೆ ವಿಲೇವಾರಿ ಮಾಡಬೇಕು. ಅರ್ಹ ಫಲಾನುಭವಿ ಉದ್ಯಮಿಗಳಿಗೆ ಶೀಘ್ರವಾಗಿ ಸಬ್ಸಿಡಿ ವಿತರಿಸಬೇಕು ಎಂದರು.

ಪಿ.ಎಂ.ಎಫ್​.ಎಂ.ಇ ಯೋಜನೆಯಡಿ ನಿಗದಿತ ಗುರಿಗೆ ಹೆಚ್ಚು ಅರ್ಜಿಗಳು ಸ್ವೀಕೃತವಾಗದೇ ಇರುವುದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಸಿ.ಇ.ಓ, ಯೋಜನೆ ಬಗ್ಗೆ ಜನಸಾಮಾನ್ಯರಿಗೆ ಹೆಚ್ಚು ಅರಿವು ಮೂಡಿಸಿ, ಯೋಜನೆಯ ಫಲಾನುಭವಿಗಳನ್ನಾಗಿಸಲು ಕ್ರಮ ವಹಿಸಬೇಕು. ಯೋಜನೆಯಡಿ ಸ್ವೀಕೃತವಾದ ಅರ್ಜಿಗಳು ತಿರಸತವಾಗದಂತೆ ನೋಡಿಕೊಳ್ಳಬೇಕು. ಪಿ.ಎಂ. ವಿಶ್ವಕರ್ಮ ಯೋಜನೆಯಡಿ ಬಾಕಿ ಇರುವ ಅರ್ಜಿಗಳ ವಿಲೇವಾರಿಗೆ ಶೀಘ್ರವೇ ಕ್ರಮವಹಿಸಬೇಕು ಎಂದರು.

ಲೀಡ್​ ಬ್ಯಾಂಕ್​ ಮ್ಯಾನೇಜರ್​ ಹರೀಶ್​ ಮಾತನಾಡಿ, ಜಿಲ್ಲೆಯಲ್ಲಿ ಕೃಷಿ ವಲಯಕ್ಕೆ 4,439 ಕೋಟಿ ರೂ. ನಿಗದಿತ ಗುರಿಯಲ್ಲಿ 3003 ಕೋಟಿ ರೂ. ವಿತರಿಸಲಾಗಿದೆ. ಎಂ.ಎಸ್​.ಎಂ.ಇ ವಲಯಕ್ಕೆ 3425 ಕೋಟಿ ರೂ. ಗುರಿ ನಿಗದಿಪಡಿಸಲಾಗಿದ್ದು, 2,495 ಕೋಟಿ ರೂ., ಶಿಕ್ಷಣ ವಲಯಕ್ಕೆ 139 ಕೋಟಿ ರೂ. ನಿಗಧಿತ ಗುರಿಯಲ್ಲಿ 113 ಕೋಟಿ ರೂ., ವಸತಿ ಕ್ಷೇತ್ರಗಳಿಗೆ 369 ಕೋಟಿ ರೂ. ನಿಗಧಿತ ಗುರಿಯಲ್ಲಿ 197 ಕೋಟಿ ರೂ. ಹಾಗೂ ಇತರೆ ವಲಯಗಳಿಗೆ 422 ಕೋಟಿ ರೂ. ನಿಗದಿತ ಗುರಿಯಲ್ಲಿ 281 ಕೋಟಿ ರೂ. ವಿತರಿಸಲಾಗಿದೆ ಎಂದರು. ಆರ್​.ಬಿ.ಐ. ಪ್ರತಿನಿಧಿ ಇಳಾ ಸಾಹು, ಮಂಗಳೂರು ನಬಾರ್ಡ್​ನ ಡಿ.ಡಿ.ಎಂ ಸಂಗೀತಾ ಕಾರ್ಥಾ, ಎಸ್​.ಸಿ.ಡಿ.ಸಿ.ಸಿ ಬ್ಯಾಂಕ್​ನ ಅಸಿಸ್ಟೆಂಟ್​ ಜನರಲ್​ ಮ್ಯಾನೆಜರ್​ ರಾಜೇಶ್​ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಮೂರನೇ ತೆಮಾಸಿಕದಲ್ಲಿ ಬ್ಯಾಂಕಿಂಗ್​ ಠೇವಣಿ ಮತ್ತು ಸಾಲ ಅನುಪಾತವು ಶೇ. 0.06 ರಷ್ಟು ಏರಿಕೆಯಾಗಿದೆ. ಈ ವರ್ಷ ಬ್ಯಾಂಕ್​ ವ್ಯವಹಾರ 61,697 ಕೋಟಿ ರೂ.ಗಳಾಗಿದ್ದು, ಕಳೆದ ವರ್ಷಕ್ಕಿಂದ ಶೇ. 9.80ರಷ್ಟು ಏರಿಕೆಯಾಗಿದೆ. 41555 ಕೋಟಿ ರೂ. ಠೇವಣಿ ಹೊಂದಿದ್ದು, ಶೇ.9.75ರಷ್ಟು ವೃದ್ಧಿಯಾಗಿದೆ. ಶೀಬಾ ಸಹಜನ್​, ಡಿಜಿಎಂ, ಕೆನರಾ ಬ್ಯಾಂಕ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net