ಎಫ್ ಪಿ ಒ ಉತ್ಪನ್ನಗಳ ಮೌಲ್ಯವರ್ಧನೆಗೆ ಕ್ರಮ ವಹಿಸಿ: ಬಾಯಲ್​

udp-25-Lead Bank 2
Published on

ಉಡುಪಿ: ಬ್ಯಾಂಕ್​ ಅಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಜಿಲ್ಲೆಯಲ್ಲಿರುವ ಎಫ್ ಪಿ ಒ (ಫರ್ಮರ್​ ಪ್ರೊಡ್ಯೂಸರ್​ ಆರ್ಗನೈಜೇಶನ್​) ಉತ್ಪನ್ನಗಳ ಮೌಲ್ಯವರ್ಧನೆಗೆ ಕ್ರಮ ವಹಿಸಬೇಕು. ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಸಾಲಸೌಲಭ್ಯಗಳನ್ನು ಒದಗಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್​ ಬಾಯಲ್​ ತಿಳಿಸಿದರು.

ಮಂಗಳವಾರ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಡಾ. ವಿ.ಎಸ್​ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಲೀಡ್​ ಬ್ಯಾಂಕ್​ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಧಾನಮಂತ್ರಿ ಉದ್ಯೋಗ ಸೃಜನಾ ಯೋಜನೆಯಡಿ ಜಿಲ್ಲೆಯ ಉದ್ಯಮಿಗಳನ್ನು ಬೆಂಬಲಿಸುವುದರೊಂದಿಗೆ ಉದ್ಯೋಗಾವಕಾಶ ಸೃಷ್ಠಿಸಲು 595 ಫಲಾನುಭವಿಗಳಿಗೆ 39.98 ಕೋಟಿ ರೂ. ಸಾಲ ವಿತರಿಸಲಾಗಿದೆ. ಬಾಕಿ ಉಳಿದ ಅರ್ಜಿಗಳನ್ನು ಆದ್ಯತೆಯ ಮೇಲೆ ವಿಲೇವಾರಿ ಮಾಡಿ, ಅರ್ಹ ಫಲಾನುಭವಿ ಉದ್ಯಮಿಗಳಿಗೆ ಸಬ್ಸಿಡಿಯನ್ನು ಶೀಘ್ರವಾಗಿ ವಿತರಿಸಬೇಕು. ಸರ್ಕಾರಿ ಇಲಾಖೆಗಳಿಂದ ಶಿಾರಸ್ಸು ಮಾಡಲ್ಪಟ್ಟ ಅರ್ಜಿಗಳನ್ನು ತಿರಸ್ಕರಿಸಿದ ಬಗ್ಗೆ ಆಯಾ ಇಲಾಖೆಗೆ ಮಾಹಿತಿ ಒದಗಿಸಬೇಕು ಎಂದು ಸೂಚನೆ ನೀಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿ ಮಾಡಿದ್ದು, ಈ ಕುರಿತು ಬ್ಯಾಂಕ್​ ಅಧಿಕಾರಿಗಳು ತಮ್ಮ ಪ್ರೀಮಿಯಂ ಗ್ರಾಹಕರಿಗೆ ಮಾಹಿತಿ ನೀಡುವ ಮೂಲಕ ಯೋಜನೆಯ ಫಲಾನುಭವಿಗಳನ್ನಾಗಿಸಲು ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗಮನಾರ್ಹ ಬೆಳವಣಿಗೆಯಾಗಿದ್ದು, ಇದರೊಂದಿಗೆ ವ್ಯಾಪಾರೋದ್ಯಮವೂ ಬೆಳೆಯಬೇಕಿದೆ. ಇದಕ್ಕೆ ಪೂರಕವಾಗಿ ಬ್ಯಾಂಕ್ಗಳು ಕಾರ್ಯನಿರ್ವಹಿಸಬೇಕು. ಇದರಿಂದ ಠೇವಣಿ ಮತ್ತು ಸಾಲ (ಸಿಡಿ) ಅನುಪಾತದಲ್ಲಿ ಸಮತೋಲನ ಕಾಪಾಡಿಕೊಳ್ಳಬಹುದು ಎಂದರು.

ಕೆನರಾ ಬ್ಯಾಂಕ್​ನ ರೀಜನಲ್​ ಮ್ಯಾನೆಜರ್​ ಶೀಬಾ ಶೆಹಜಾನ್​ ಮಾತನಾಡಿ, ಜಿಲ್ಲೆಯಲ್ಲಿ ವಿಶೇಷ ಗಮನ ಕಾರ್ಯಕ್ರಮಗಳ ಅಡಿಯಲ್ಲಿ ಬ್ಯಾಂಕುಗಳು ದುರ್ಬಲ ವರ್ಗಗಳಿಗೆ 1793 ಕೋಟಿ ರೂ., ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ 158.72 ಕೋಟಿ ರೂ., ವಸತಿ ಕ್ಷೇತ್ರಗಳ ಸುಸ್ಥಿರ ಅಭಿವೃದ್ಧಿಗಾಗಿ 1078 ಕೋಟಿ ರೂ. ಗಳ ಸಾಲ ವಿತರಣೆ ಮಾಡಲಾಗಿದೆ ಎಂದರು.

ಜಿಲ್ಲೆಯ ಬ್ಯಾಂಕ್​ಗಳಲ್ಲಿ ಕಳೆದ ಸಾಲಿನಲ್ಲಿ 51,494 ಕೋಟಿ ರೂ. ವ್ಯವಹಾರ ನಡೆದಿದ್ದು, ಪ್ರಸಕ್ತ ಸಾಲಿನಲ್ಲಿ 57,467 ಕೋಟಿ ರೂ ವ್ಯವಹಾರ ನಡೆದು, 5973 ಕೋಟಿ ರೂ. ಹೆಚ್ಚಾಗಿ ಶೇ.11.60 ರಷ್ಟು ಬೆಳೆವಣಿಗೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಬ್ಯಾಂಕಿಂಗ್​ ಠೇವಣಿ ಅನುಪಾತವು ಶೇ.46.06 ಇದ್ದು, ಪ್ರಸಕ್ತ ಸಾಲಿನಲ್ಲಿ ಶೇ.46.94 ರಷ್ಟು ಬೆಳವಣಿಗೆಯಾಗಿದ್ದು, ಶೇ. 0.88 ರಷ್ಟು ಸಾಧನೆ ಮಾಡಲಾಗಿದ್ದರೂ ಸಹ ಸಿ.ಡಿ ಅನುಪಾತದಲ್ಲಿ ಜಿಲ್ಲೆಯು ಶೇ. 50ಕ್ಕಿಂತ ಕಡಿಮೆ ಇರುವುದು ಅತ್ಯಂತ ಕಳವಳಕಾರಿ ಸಂಗತಿ ಎಂದರು.

ಸಭೆಯಲ್ಲಿ ಮಡಿಕೇರಿಯ ಡಿ.ಡಿ.ಎಮ್​. ರಮೇಶ್​, ಜಿಲ್ಲಾ ಲೀಡ್​ ಬ್ಯಾಂಕ್​ ಮ್ಯಾನೇಜರ್​ ಹರೀಶ್​ ಜಿ., ಆರ್​.ಬಿ.ಐ. ಎಕ್ಸಿಕ್ಯುಟಿವ್​ ಇಳಾ ಸಾಹು, ಎಸ್​.ಸಿ.ಡಿ.ಸಿ.ಸಿ ಬ್ಯಾಂಕ್​ನ ಸಹಾಯಕ ಉಪ ಪ್ರಬಂಧಕ ನಿತ್ಯಾನಂದ ಶೇರಿಗಾರ್​ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net