ಎಸಿ-ತಹಸೀಲ್ದಾರ್​ಗಳಿಗೆ ಲೋಕಾ ಶಾಕ್

Published on

ಕೊಪ್ಪಳ: ನಿವೃತ್ತ, ಹುತಾತ್ಮ ಯೋಧರು, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅವರ ಅವಲಂಬಿತರಿಗೆ ಸೌಲಭ್ಯ ಕಲ್ಪಿಸುವಲ್ಲಿ ಕರ್ತವ್ಯಲೋಪ ಹಾಗೂ ಭ್ರಷ್ಟಾಚಾರ ನಡೆಸಿದ ಆರೋಪದಡಿ ಸಹಾಯಕ ಆಯುಕ್ತ ಹಾಗೂ ಏಳು ತಹಸೀಲ್ದಾರ್​ಗಳ ವಿರುದ್ಧ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ.

ನಿವೃತ್ತ, ಹುತಾತ್ಮ ಯೋಧರ ಕುಟುಂಬದವರು, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅವರ ಅವಲಂಬಿತರಿಗೆ ಸರ್ಕಾರದಿಂದ ನಿವೇಶನ, ಜಮೀನು ಹಾಗೂ ಇನ್ನಿತರ ಸೌಲಭ್ಯ ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸಲ್ಲಿಕೆಯಾದ ಅರ್ಜಿಗಳಿಗೆ ಅಧಿಕಾರಿಗಳು ಸ್ಪಂದಿಸಿಲ್ಲ. ಅನಗತ್ಯ ವಿಳಂಬ ಮಾಡುತ್ತಿದ್ದಾರೆ. ಭ್ರಷ್ಟಾಚಾರದ ಆರೋಪವೂ ಕೇಳಿ ಬಂದಿದೆ. ಈ ಬಗ್ಗೆ ಸಾಕಷ್ಟು ದೂರುಗಳು ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿವೆ. ಹೆಚ್ಚಿನ ತನಿಖೆ ಅವಶ್ಯ ಎನಿಸಿದ್ದರಿಂದ ಕೊಪ್ಪಳ ಸಹಾಯಕ ಆಯುಕ್ತ ಕ್ಯಾ.ಮಹೇಶ ಮಾಲಗಿತ್ತಿ, ಕೊಪ್ಪಳ ತಹಸೀಲ್ದಾರ್​ ವಿಠ್ಠಲ್​ ಚೌಗಲಾ, ಗಂಗಾವತಿ ತಹಸೀಲ್ದಾರ್​ ಯು.ನಾಗರಾಜ, ಕುಷ್ಟಗಿ ತಹಸೀಲ್ದಾರ್​ ಅಶೋಕ ಎಸ್​. ಶಿಗ್ಗಾವಿ, ಯಲಬುರ್ಗಾ ತಹಸೀಲ್ದಾರ್​ ಬಸವರಾಜ, ಕಾರಟಗಿ ತಹಸೀಲ್ದಾರ್​ ಕುಮಾರಸ್ವಾಮಿ, ಕನಕಗಿರಿ ತಹಸೀಲ್ದಾರ್​ ವಿಶ್ವನಾಥ ಮುರಡಿ, ಕುಕನೂರು ತಹಸೀಲ್ದಾರ್​ ಪ್ರಾಣೇಶ ವಿರುದ್ಧ ಲೋಕಾಯುಕ್ತ ಸ್ವಯಂ ದೂರು ದಾಖಲಿಸಿಕೊಂಡಿದೆ.

ಸರ್ಕಾರದ ಆದೇಶ, ನಿಯಮಗಳನ್ವಯ ಸೌಲಭ್ಯ ಕಲ್ಪಿಸಲು ಹೈಕೋರ್ಟ್​ ಆದೇಶಗಳಿವೆ. ಹೀಗಿದ್ದರೂ ಲಾನುಭವಿಗಳಿಗೆ ತೊಂದರೆ ಕೊಡುತ್ತಿದ್ದಾರೆ. ದೇಶ ರಕ್ಷಣೆಗೆ ಪ್ರಾಣ ನೀಡಿದ, ಅಂಗಾಂಗಗಳನ್ನು ಕಳೆದುಕೊಂಡ ಯೋಧರಿಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ನೀಡುವುದು ಪದೆತಿಯೊಬ್ಬ ಭಾರತೀಯರ ಕರ್ತವ್ಯ. ಅಂಥ ಯೋಧರು, ಸ್ವಾತಂತ್ರ್ಯ ಹೋರಾಟಗಾರರು ಅವರ ಅವಲಂಬಿತರಿಗೆ ಅಗೌರವ ಮಾಡಿದ್ದಕ್ಕೆ ಉಪಲೋಕಾಯುಕ್ತರು ವಿಷಾದ ವ್ಯಕ್ತಪಡಿಸಿದ್ದು ತನಿಖೆಗೆ ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net