

ಕೊಪ್ಪಳ: ಎಲ್ಲ ಅಧಿಕಾರಿಗಳು ಸಭೆಗೆ ಬರುವಾಗ ಸಮಗ್ರ ಮಾಹಿತಿಯೊಂದಿಗೆ ಬನ್ನಿ. ಇಲಾಖೆ ಯೋಜನೆಗಳ ಬಗ್ಗೆ ನಿಮಗೆ ಮಾಹಿತಿ ಇಲ್ಲದಿದ್ದರೆ ಜನರಿಗೆ ಹೇಗೆ ತಲುಪಿಸುತ್ತೀರಿ ಎಂದು ಸಂಸದ ರಾಜಶೇಖರ ಹಿಟ್ನಾಳ ಪ್ರಶ್ನಿಸಿದರು.
ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದಿಶಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಬೆಳೆವಿಮೆ ಯೋಜನೆಯಡಿ ನೋಂದಾಯಿಸಿಕೊಂಡವ ರೈತರೆಷ್ಟು ? ಬಂದ ಪರಿಹಾರ ಮೊತ್ತವೆಷ್ಟು. ಯೋಜನೆಯಡಿ ಅನ್ನದಾತರಿಗಿಂತ ವಿಮಾ ಕಂಪನಿಗಳಿಗೆ ಲಾಭವಾಗುತ್ತಿದೆ. ವಾಹನ ಅಪಘಾತ ವಿಮೆ ಮಾದರಿಯಲ್ಲಿ ಬೆಳೆವಿಮೆ ಮಾಡಬೇಕು. ಅಂದಾಗ ಪ್ರಯೋಜನವಾಗಲಿದೆ. ಈ ಬಗ್ಗೆ ಮೇಲಧಿಕಾರಿಗಳಿಗೆ ಪತ್ರ ಬರೆದು ತಿಳಿಸುವಂತೆ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
ಡಿಎಚ್ಒ ಡಾ.ಟಿ.ಲಿಂಗರಾಜ ಮಾತನಾಡಿ, ಪಿಪಿಐಯುಸಿಡಿ ಯೋಜನೆಯಲ್ಲಿ ಕೊಪ್ಪಳ ಮೊದಲ ಸ್ಥಾನದಲ್ಲಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 20 ತಜ್ಞ ವೈದ್ಯರನ್ನು ನೇಮಿಸಲಾಗಿದೆ. ಕಳೆದ ವರ್ಷ 9 ಗ್ರಾಪಂಗಳನ್ನು ಕ್ಷಯ ಮುಕ್ತವೆಂದು ಘೋಷಿಸಿದ್ದಾಗಿ ವಿವರಿಸಿದರು. ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವಂತೆ ಸಂಸದರು ತಾಕೀತು ಮಾಡಿದರು.
ಮುಂದುವರೆದು, ಬೇಸಿಗೆ ಆರಂಭವಾಗಿದ್ದು, ಜನರಿಗೆ ಕುಡಿವ ನೀರಿನ ತೊಂದರೆಯಾಗದಿರಲಿ. ಜೆಜೆಎಂ ಕಾಮಗಾರಿ ಬೇಗ ಪೂರ್ಣಗೊಳಿಸಿ. ಈವರೆಗೆ 663 ಕಾಮಗಾರಿ ಮುಗಿದ ಬಗ್ಗೆ ವರದಿ ನೀಡಿದ್ದೀರಿ. ಬಾಕಿ ಕಾಮಗಾರಿ ಬೇಗನೆ ಮುಗಿಯಲಿ. ಜನತೆಗೆ 24*7 ಕುಡಿವ ನೀರು ಸಿಗುವಂತಾಗಬೇಕೆಂದು ಸಲಹೆ ನೀಡಿದರು.
ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಮಾತನಾಡಿ, ಕನಕಗಿರಿ ತೋಟಗಾರಿಕೆ ಟೆಕ್ ಪಾರ್ಕ್ ಸಾರ್ವಜನಿಕ&ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನವಾಗುತ್ತಿದ್ದು, ಕೊನೆಯ ಹಂತದಲ್ಲಿದೆ. ಮೂಲ ಸೌಕರ್ಯ ಅಭಿವೃದ್ಧಿಗೆ 20 ಕೋಟಿ ರೂ. ಅಗತ್ಯವಿದೆ. ನಾವು ಭೂಮಿ, ನೀರು, ವಿದ್ಯುತ್ ನೀಡಿದಲ್ಲಿ ಉದ್ಯಮಿಗಳು ಮುಂದೆ ಬರುವರು. ಇದರಿಂದ ನಮ್ಮ ಭಾಗಕ್ಕೆ ಅನುಕೂಲವೆಂದು ಮಾಹಿತಿ ನೀಡಿದರು. ಇದಕ್ಕೆ ಸ್ಪಂದಿಸಿದ ಸಂಸದರು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ಜಿಲ್ಲೆಯ ಅಂಗನವಾಡಿ, ಶಾಲಾ&ಕಾಲೇಜುಗಳಲ್ಲಿ ಅರಣ್ಯಾಧಿಕಾರಿಗಳು ಗಿಡ ನೆಡಿ. ಅಂಜನಾದ್ರಿ, ಹುಲಿಗೆಮ್ಮ ದೇವಿ ದೇವಾಲಯ, ಆನೆಗೊಂದಿ ಸೇರಿ ಇತರ ಪ್ರವಾಸಿ ತಾಣ ಅಭಿವೃದ್ಧಿಪಡಿಸಿ. ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿ. ನರೇಗಾದಡಿ ಮಾನವ ದಿನ ಸೃಜನೆ ಗುರಿ ಸಾಧಿಸಿ. ಸರಿಯಾಗಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿ. ಜನರು ಸಮಸ್ಯೆ ಹೇಳಿಕೊಂಡು ಬಂದಾಗ ಸ್ಪಂದಿಸಿ. ಸಭೆ, ಸಮಾರಂಭಕ್ಕೆ ಸರಿಯಾದ ಸಮಯಕ್ಕೆ ಹಾಜರಾಗಿ ಎಂದು ವಿವಿಧ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅಧಿಕಾರಿಗಳು ಸಭೆಯಲ್ಲಿ ಎಲ್ಲವೂ ಆಗಿವೆ ಎಂದು ಮಾಹಿತಿ ನೀಡುತ್ತೀರಿ. ಆದರೆ, ಸ್ಥಳಕ್ಕೆ ತೆರಳಿದಾಗ ಕಾಮಗಾರಿ ಆಗಿರುವುದಿಲ್ಲ. ಇನ್ನು ಮುಂದೆ ಹೋಬಳಿ ಮಟ್ಟದಲ್ಲಿ ಸಭೆ ನಡೆಸಿ ಜನರಿಂದ ಮಾಹಿತಿ ಪಡೆಯುವೆ ಎಂದು ಎಚ್ಚರಿಸಿದರು.
ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯಾ ಚತುರ್ವೇದಿ, ದಿಶಾ ಸಮಿತಿ ಸದಸ್ಯರಾದ ಸರಸ್ವತಿ ಇಟ್ಟಂಗಿ, ದೊಡ್ಡಬನಗೌಡ ಬಯ್ಯಾಪುರ, ಅಂಬಣ್ಣ ನಾಯಕ, ನಂದಿತಾ ದಾನರಡ್ಡಿ, ಭಾಗ್ಯನಗರ ಪಪಂ ಅಧ್ಯಕ್ಷ ತುಕಾರಾಮಪ್ಪ ಗಡಾದ್, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಡಿಯುಡಿಸಿ ಪಿಡಿ ರೇಷ್ಮಾ ಹಾನಗಲ್ ಇತರರಿದ್ದರು.