ರಾಜ್ಯದ ಮೊದಲ ಹೋಬಳಿ ವಿಸ್ತರಣಾ ಕೇಂದ್ರ ಉದ್ಘಾಟಿಸಿದ ಸಚಿವ ಬೈರೇಗೌಡ

district-koppal-yalaburga-bevoor-minister-ktishna-bairegouda-innaugrates-extention-center
Published on

ಯಲಬುರ್ಗಾ (ಕೊಪ್ಪಳ): ತಾಲೂಕಿನ ಬೇವೂರು ಹೋಬಳಿ ವಿಸ್ತರಣಾ ಕೇಂದ್ರವನ್ನು ಮಂಗಳವಾರ ಕಂದಾಯ ಸಚಿವ ಕೃಷ್ಣ ಬೈರೇಗೌಡ ಉದ್ಘಾಟಿಸಿದರು. ಶಾಸಕ ಬಸವರಾಜ ರಾಯರಡ್ಡಿ ಸಾಥ್ ನೀಡಿದರು.

ಬಳಿಕ ಮಾತನಾಡಿದ ಸಚಿವ ಬೈರೇಗೌಡ, ಬರಪರಿಹಾರ ವಿತರಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಮಳೆ‌ ಕೊರತೆ, ಬೆಳೆ‌ಹಾನಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ.

ಕೇಂದ್ರ ತಂಡವೂ ಅಧ್ಯಯನ ನಡೆಸಿ ವರದಿ ಪಡೆದಿದೆ. ಪರಿಹಾರ ಬಿಡುಗಡೆ ಆಗಿಲ್ಲ. ಸದ್ಯ ರಾಜ್ಯ ಸರ್ಕಾರದಿಂದಲೇ ತಲಾ ಎರಡು ಸಾವಿರ ರೂ. ಪರಿಹಾರ ನೀಡಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ.

ಈ ವಾರದಲ್ಲಿ ಪ್ರಾಯೋಗಿಕವಾಗಿ ಒಂದು ತಾಲೂಕಿನ ರೈತರಿಗೆ ನೇರವಾಗಿ ಅವರ ಖಾತೆಗೆ ಪರಿಹಾರ ಹಾಕುತ್ತೇವೆ. ಬಳಿಕ ಎಲ್ಲರಿಗೂ ವಿತರಿಸಲಾಗುವುದು. ಇದರಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ ಎಂದರು.

ಸಚಿವ ಶಿವಾನಂದ ಪಾಟೀಲ್ ರೈತರು ಬರ ಬೀಳಲೆಂದು ಬಯಸುತ್ತಾರೆಂದು ಹೇಳಿದ ಬಗ್ಗೆ ಬೈರೇಗೌಡರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಅದ್ದೂರಿ ಸ್ವಾಗತ: ಸಚಿವ ಬೈರೇಗೌಡಗೆ ಶಾಸಕ ರಾಯರಡ್ಡಿ ಅದ್ದೂರಿ ಸ್ವಾಗತ ಕೋರಿದರು‌. ಕಲಾ ತಂಡಗಳ ಮೂಲಕ ಮೆರವಣಿಗೆ ಮಾಡಲಾಯಿತು. ರಾಜ್ಯದ ಮೊದಲ ಹೋಬಳಿ ವಿಸ್ತರಣಾ ಕೇಂದ್ರ ಇದಾಗಿದ್ದು, 11 ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net