

ಕೊಪ್ಪಳ: ಮನಸಿನ ಸಮತೋಲನ ಕಾಪಾಡಿ ಆರೋಗ್ಯ ವೃದ್ಧಿಸಲು ಆಯುರ್ವೇದ ಹಾಗೂ ಯೋಗ ಸಹಕಾರಿ ಎಂದು ಪ್ರಾಧ್ಯಾಪಕಿ ಅಪರ್ಣಾ ಭಟ್ ಅಭಿಪ್ರಾಯಪಟ್ಟರು.
ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾನಸಂ ರಾಷ್ಟ್ರೀಯ ಆಯುರ್ವೇದ ಸಮ್ಮೇಳನ ಮತ್ತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಆಯುರ್ವೇದದಲ್ಲಿ ಹೇಳಲಾದ ಪ್ರತಿಯೊಂದು ಅಂಶಗಳ ಪಾಲನೆ ಅನಿವಾರ್ಯ. ಇದರಿಂದ ಉತ್ತಮ ಆರೋಗ್ಯ ಹೊಂದಬಹುದು. ಅದನ್ನು ನಾವೆಲ್ಲ ಅರಿಯಬೇಕಿದೆ. ಆಯುರ್ವೇದ ಬಳಕೆ ಹೆಚ್ಚಬೇಕು. ಯೋಗದಿಂದ ಅನೇಕ ರೋಗ ತಡೆಗಟ್ಟಬಹುದೆಂದು ತಿಳಿಸಿದರು.
ಕೆಎಲ್ಇ ಸಂಸ್ಥೆ ಆಯುರ್ವೇದ ವಿಭಾಗ ಡೀನ್ ಡಾ.ಬಸವರಾಜ ತುಬಾಕಿ ಮಾತನಾಡಿ, ಮಾನಸ ರೋಗಗಳ ಮೇಲೆ ಆಯುರ್ವೇದ ಮೂಲಕ ಸಂಶೋಧನೆಗೈದ ಹಲವು ಚಿಕಿತ್ಸಾ ಕ್ರಮಗಳ ಬಗ್ಗೆ ವಿವರವಾಗಿ ತಿಳಿಸಿದರು. ಗವಿಸಿದ್ದೇಶ್ವರ ಆಯುರ್ವೇದ ಕಾಲೇಜು ಪ್ರಾಚಾರ್ಯ ಡಾ.ಮಹೇಶ ಸಾಲಿಮಠ ಮಾತನಾಡಿದರು.
ಡಾ.ಸ್ವಪ್ನಾ ಪಾಂಡುರಂಗ, ಡಾ.ಮಾಧವ ದಿಗ್ಗಾವಿ ಮಾನಸಿಕ ರೋಗಿಗಳನ್ನು ಅರ್ಥ ಮಾಡಿಕೊಳ್ಳುವ ಹಾಗೂ ಚಿಕಿತ್ಸೆ ನೀಡುವ ಬಗ್ಗೆ ವಿವರಿಸಿದರು. ಡಾ.ಮಂಗಳಾ ಸಜ್ಜನರ, ಡಾ.ಪ್ರಭು ನಾಗಲಾಪೂರ, ಡಾ.ಸೋಮನಾಥ ಎಸ್., ಡಾ.ಆಶಾ.ಎಸ್.ಎ, ಡಾ.ಅಮಲ್ ಎಸ್. ಚಂದ್ರನ್, ಡಾ.ನವೀನಕುಮಾರ, ಡಾ.ಮಂಜುಳಾ ಕರ್ಲವಾಡ ಇತರರು ಉಪನ್ಯಾಸ ನೀಡಿದರು.
ಉಪ ಪ್ರಾಚಾರ್ಯ ಡಾ.ಸುರೇಶ ಹಕ್ಕಂಡಿ, ವೀರೇಶ ಕೊತಬಾಳ, ಡಾ.ವೀಣಾ ಪತ್ತಾರ, ಡಾ.ಅಮೂಲ್ಯ, ಡಾ.ಶಿವಾನಂದ ಇತರರಿದ್ದರು.