

ಕೊಪ್ಪಳ: ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳನ್ನು ರೂಢಿಸಿದಾಗ ಮಕ್ಕಳ ಕಲಿಕಾ ಮಟ್ಟ ಹೆಚ್ಚಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ಗಂಗಪ್ಪ ಹೇಳಿದರು.
ನಗರದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮಕ್ಕಳಿಗೆ 15 ದಿನಗಳ ಕಾಲ ಚಿತ್ರಕಲೆ, ಜೇಡಿಮಣ್ಣಿನ ಕಲೆ, ಕರಕುಶಲ, ಕರಾಟೆ, ಯೋಗ, ಸಮೂಹ ಸಂಗೀತ ಮತ್ತು ಸಮೂಹ ನೃತ್ಯ ಚಟುವಟಿಕೆ ಮಾಡಿಸಲಾಗಿದೆ. ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಡಿಸಲಾಗಿದೆ. ಇಂದು ಎಲ್ಲ ಕಲೆಗಳ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದೆ. 15 ದಿನದಲ್ಲಿ ಮಕ್ಕಳು ಚಟುವಟಿಕೆಗಳ ಮೂಲಕ ಹೊಸ ವಿಷಯಗಳನ್ನು ಕಲಿತಿರುವುದು ಸಂತಸ ತಂದಿದೆ ಎಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ಮಾತನಾಡಿ, ಮಕ್ಕಳಿಗೆ ಇಂತಹ ಕಾರ್ಯಕ್ರಮಗಳು ಅವಶ್ಯ. ಮಕ್ಕಳು ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಯುನಿಸ್ೆ ಜಿಲ್ಲಾ ಸಂಯೋಜಕ ಹರೀಶ ಜೋಗಿ ಮಾತನಾಡಿ, ಮಕ್ಕಳಿಗೆ ಚಟುವಟಿಕೆಗಳ ಮೂಲಕ ಕಲಿಸಿದಲ್ಲಿ ಬೇಗ ಕಲಿಯುತ್ತಾರೆ. ಉತ್ತಮವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇನ್ನಷ್ಟು ಇಂಥ ಕಾರ್ಯಕ್ರಮಗಳು ಮೂಡಿಬರಲಿ ಎಂದು ಸಲಹೆ ನೀಡಿದರು.
ಸಿಡಿಪಿಒಗಳಾದ ರೋಹಿಣಿ ಕೊಟಗಾರ, ಜಯಶ್ರೀ ಆರ್., ವಿಷಯ ಪರಿವೀಕ್ಷಕಿ ವೀಣಾ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ದಿವ್ಯಜೋತಿ, ಮಂಗಳ, ಯಮನೂರಪ್ಪ ಹಾಗೂ ಸಂಪನ್ಮೂಲ ವ್ಯಕ್ತಿಗಳು, ವಿವಿಧ ಶಾಲೆಯ ಮಕ್ಕಳು, ಸರ್ಕಾರಿ ಬಾಲ ಮಂದಿರದ ಚಿಣ್ಣರು ಇದ್ದರು.