ಕೊಪ್ಪಳ: ನಗರದ ಜಿಲ್ಲಾಡಳಿತ ಭವನದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಬುಧವಾರ ಇಬ್ಬರು ಉಪನಿದೇರ್ಶಕರು ಹಾಜರಾಗಿದ್ದು, ಅಧಿಕಾರಿಗಳು ಹಾಗೂ ಸಾರ್ವಜನಿಕರಲ್ಲಿ ಗೊಂದಲ ಉಂಟು ಮಾಡಿದೆ.
ಹಿಂದಿನ ಉಪನಿರ್ದೇಶಕ ತಿಪ್ಪಣ್ಣ ಸಿರಸಗಿ ಹಾಗೂ ಸದ್ಯ ಇರುವ ಡಿಡಿ ಪರಶುರಾಮ್ ವೈ.ಶೆಟ್ಟೆಪ್ಪನವರ ಇಬ್ಬರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ತಿಪ್ಪಣ್ಣ ಸಿರಸಗಿ 2023ರ ಸೆಪ್ಟಂಬರ್ 8ರಂದು ಕೊಪ್ಪಳ ಡಿಡಿಯಾಗಿ ಅಧಿಕಾರವಹಿಸಿಕೊಂಡಿದ್ದರು. 2024ರ ಅಕ್ಟೋಬರ್ನಲ್ಲಿ ಕರ್ತವ್ಯಲೋಪ ಹಿನ್ನೆಲೆಯಲ್ಲಿ ಅಮಾನತಾಗಿದ್ದರು. ಅವರ ಸ್ಥಳಕ್ಕೆ ಇಲಾಖೆ ಪರಶುರಾಮ್ ಶೆಟ್ಟೆಪ್ಪನವರ ಅವರನ್ನು ನಿಯೋಜಿಸಿತ್ತು. ಅಮಾನತು ಆದೇಶ ಪ್ರಶ್ನಿಸಿ ತಿಪ್ಪಣ್ಣ ಕೆಎಟಿ ಮೊರೆ ಹೋಗಿದ್ದರು. ಕಳೆದ ಜ.20ರಂದು ಕೆಎಟಿ ತಿಪ್ಪನ್ನ ಅರ್ಜಿ ಮಾನ್ಯ ಮಾಡಿ ಸರ್ಕಾರದ ಆದೇಶ ರದ್ದುಪಡಿಸಿದೆ. ಶೆಟ್ಟೆಪ್ಪನವರ ವರ್ಗಾವಣೆ ಆದೇಶವನ್ನು ಅನೂರ್ಜಿತಗೊಳಿಸಿದೆ. ನನ್ನ ಅವಧಿ ಇದ್ದು ಮರಳಿ ಅಧಿಕಾರವಹಿಸಿಕೊಂಡಿರುವೆ ಎಂಬುದು ತಿಪ್ಪಣ್ಣ ವಾದ.
ಇನ್ನು ಸರ್ಕಾರ ತಮ್ಮನ್ನು ಕೊಪ್ಪಳ ಜಿಲ್ಲೆಗೆ ನಿಯೋಜಿಸಿ ಆದೇಶಿಸಿದೆ. ಈಗ ತಿಪ್ಪಣ್ಣ ಅವರಿಗೆ ಮರು ಆದೇಶ ಮಾಡಿದರೆ ನಾನು ಹೋಗುವೆ. ಇಲಾಖೆಯಿಂದ ಯಾವುದೇ ನಿದೇಶನ ಬಂದಿಲ್ಲ. ಆದರೂ, ಅನಧಿಕೃತವಾಗಿ ನನ್ನ ಕುರ್ಚಿ ಮೇಲೆ ತಿಪ್ಪಣ್ಣ ಕುಳಿತಿದ್ದಾರೆ. ಈ ಬಗ್ಗೆ ಡಿಸಿ, ಸಿಇಒ ಹಾಗೂ ಮೇಲಧಿಕಾರಿಗಳ ಗಮನಕ್ಕೆ ತಂದಿರುವೆ. ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾಗಿ ದೂರು ನೀಡಿರುವೆ. ಸಂಬಂಧಿಸಿದ ಅಧಿಕಾರಿಗಳ ನಿರ್ದೇಶನದಂತೆ ನಡೆದುಕೊಳ್ಳುವೆ ಎಂದು ವಿಜಯವಾಣಿಗೆ ತಿಳಿಸಿದರು.