ಮಣ್ಣಿನ ಸಂರಕ್ಷಣೆ ಅಗತ್ಯ, ಸಿಇಒ ಪಾಂಡೆಯ ಅನಿಸಿಕೆ

district koppal wolrd soil day celebration zp ceo
Published on

ಕೊಪ್ಪಳ: ಮಣ್ಣು ನೈಸರ್ಗಿಕ ಸಂಪನ್ಮೂಲ. ಅದರ ಸಂರಕ್ಷಣೆ ಅವಶ್ಯ ಎಂದು ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಹೇಳಿದರು.

ನಗರದ ಜಿಪಂ ಜೆ.ಎಚ್​.ಪಟೇಲ್​ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮ ಜೀವನಕ್ಕೆ ಮೂಲಾಧಾರ ಮಣ್ಣು. ಅದರ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಆದ್ಯತೆ ಆಗಬೇಕು. ನಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ಮಣ್ಣಿನ ಆರೋಗ್ಯ ಕಾಪಾಡುವುದು ನಮ್ಮ ಕರ್ತವ್ಯ. ಮಣ್ಣಿನ ಮಾದರಿ, ಅದಕ್ಕೆ ಬೇಕಾದ ಪೋಷಕಾಂಶ, ಬೇಡವಾದ ಪೋಷಕಾಂಶ, ಕೊರತೆ ಏನಿದೆ, ಸುಧಾರಣೆಗೆ ಏನು ಮಾಡಬೇಕೆಂಬುದನ್ನು ಅರಿಯಬೇಕು. ಮಣ್ಣಿನ ಆರೋಗ್ಯ ಕಾಪಾಡಲು ಸರ್ಕಾರ ಹಲವು ಯೋಜನೆ ಜಾರಿ ಮಾಡಿದೆ. ಈ ಬಗ್ಗೆ ರೈತರಿಗೆ ಕೃಷಿ ವಿಜ್ಞಾನಿಗಳು, ಅಧಿಕಾರಿಗಳು ತಿಳಿಸಬೇಕು. ನರೇಗಾದಲ್ಲೂ ಮಣ್ಣಿನ ರಕ್ಷಣೆಗೆ ಪೂಕರ ಬದು, ಕೃಷಿ ಹೊಂಡ, ಚೆಕ್​ ಡ್ಯಾಂ ನಿರ್ಮಿಸಲಾಗುತ್ತಿದೆ ಎಂದರು.

ಎಡಿಸಿ ಸಿದ್ರಾಮೇಶ್ವರ ಮಾತನಾಡಿ, ನಮ್ಮ ಚಟುವಟಿಕೆಗಳಿಂದ ಮಣ್ಣಿನ ಆರೋಗ್ಯ ಹದೆಗೆಡುತ್ತಿದೆ. ನಾವೆಲ್ಲರೂ ಇದಕ್ಕೆ ಕಾರಣ. ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು. ಪ್ರತಿ ದಿನ, ಪ್ರತಿಯೊಬ್ಬರೂ ಮಣ್ಣು ರಕ್ಷಿಸಬೇಕು. ಕೃಷಿಕರ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ನಾವೆಲ್ಲ ಅವರಿಗೆ ಹೆಗಲಾಗಿ ನಿಲ್ಲೋಣ ಎಂದು ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್​. ಮಾತನಾಡಿ, ಈ ವರ್ಷ ಜಿಲ್ಲೆಯಲ್ಲಿ 23,175 ಮಣ್ಣು ಮಾದರಿ ವಿಶ್ಲೇಷಿಸಲಾಗುತ್ತಿದೆ. ಮಣ್ಣಿನ ಮಹತ್ವ ಬಗ್ಗೆ ಶಾಲಾ ಮಕ್ಕಳಿಗೆ ಅರಿವು ಮೂಡಿಸಲು ಪ್ರಾಯೋಗಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕುಕನೂರಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಪ್ರಿ ಬ್ಯಾಚ್​ನಲ್ಲಿ 25 ವಿದ್ಯಾರ್ಥಿಗಳು ಒಳಗೊಂಡ 5 ಬ್ಯಾಚ್​ಗಳನ್ನು ಮಾಡಲಾಗಿದೆ. ಅವರಿಗೆ ಮಣ್ಣು ಮಾದರಿ ಸಂಗ್ರಹಣೆ ವಿಧಾನ, ವಿಶ್ಲೇಷಣೆ, ಚೀಟಿ ತಯಾರಿಕೆ, ನೀಡಬೇಕಾದ ಪೋಷಕಾಂಶಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮಣ್ಣು ಆರೋಗ್ಯ ಕಾರ್ಡ್​ ವಿತರಿಸಲಾಯಿತು. ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ.ಎಂ.ವಿ.ರವಿ ಉಪನ್ಯಾಸ ನೀಡಿದರು. ಬೆಂಗಳೂರು ಐಎಟಿ ಸಂಸ್ಥೆಯ ಕಾರ್ಯದರ್ಶಿ ವೀರಣ್ಣ ಕಮತರ, ಉಪ ಕೃಷಿ ನಿರ್ದೇಶಕ ಎಲ್​.ಸಿದ್ದೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net