

ಕೊಪ್ಪಳ: ಸಂಧಿವಾತ ಜಾಗೃತಿ ಅಂಗವಾಗಿ ಕೆಎಸ್ ಆಸ್ಪತ್ರೆಯಿಂದ ನಗರದಲ್ಲಿ ಶನಿವಾರ ರೋಗದಿಂದ ಗುಣವಾದವರಿಂದಲೇ ವಾಕಥಾನ್ ಹಮ್ಮಿಕೊಳ್ಳಲಾಯಿತು.
ನರಗದ ಕೇಂದ್ರ ಬಸ್ ನಿಲ್ದಾಣದಿಂದ, ಅಶೋಕ್ ಸರ್ಕಲ್, ಬಸವೇಶ್ವರ ಸರ್ಕಲ್ ಮೂಲಕ ಕೆ.ಎಸ್.ಆಸ್ಪತ್ರೆವರೆಗೆ ಸಾಗಿತು. ಡಾ.ಬಸವರಾಜ ನೀಡಿದ ಚಿಕಿತ್ಸೆಯಿಂದ ನೂರಕ್ಕೂ ಹೆಚ್ಚು ಗುಣವಾದ ವ್ಯಕ್ತಿಗಳು ಒಂದುವರೆ ಕಿಲೋಮೀಟರ್ ನಡೆದು ಸಂಧಿವಾತ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಹಿರಿಯ ನಾಗರಿಕರು, ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಖ್ಯಾತ ವೈದ್ಯರು, ಅರೆ ವೈದ್ಯಕಿಯ ವಿದ್ಯಾರ್ಥಿಗಳು ಸೇರಿ 1,500ಕ್ಕೂ ಹೆಚ್ಚು ಜನರು ಪಾಲ್ಗೊಂಡರು.
ಡಾ.ಬಸವರಾಕ ಕ್ಯಾವಟರ್ ಮಾತನಾಡಿ, ಸಂಧಿವಾತದಿಂದ ಅನೇಕರು ಬಳಲುತ್ತಿದ್ದಾರೆ. ನಾನು ಬೆಂಗಳೂರು, ವಿದೇಶಗಳಲ್ಲಿ ಕೆಲಸ ಮಾಡುವಾಗ ಅನೇಕರಿಗೆ ಚಿಕಿತ್ಸೆ ನೀಡಿರುವೆ. ಜಿಲ್ಲೆಯ ಜನರಿಗೆ ಅನುಕೂಲವಾಗು ನಿಟ್ಟಿನಲ್ಲಿ ಕೆ.ಎಸ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆ, ಶಸ್ತ್ರಚಿಕಿತ್ಸೆ ಮೂಲಕ ರೋಗ ಗುಣಪಡಿಸಬಹುದು. ಕೆಲವರು ಆಪರೇಷನ್ಗೆ ಹೆದರುತ್ತಾರೆ. ಅದರ ಹೊರತಾಗಿಯೂ ಚಿಕಿತ್ಸೆ ನೀಡಿ ರೋಗ ಗುಣಪಡಿಸಬಹುದು. ರೋಗದಿಂದ ಗುಣವಾದವರು ಇಂದು ನಡಿಗೆಯಲ್ಲಿ ಭಾಗಿಯಾಗಿದ್ದು ಖುಷಿ ನೀಡಿದೆ ಎಂದರು.
ಹಲವು ರೋಗಿಗಳು ತಮ್ಮ ಅನುಭವ ಹಂಚಿಕೊಂಡರು. ರೋಗದಿಂದ ಗುಣವಾದ ವೀರಯ್ಯಸ್ವಾಮಿ ಗಂಗಾವತಿ, ವಿರೇಶ, ಪ್ರಭು ಹೆಬ್ಬಾಳ, ವಿ.ಎಂ.ಭೂಸನೂರ ಮಠ, ಡಾ.ಕೃಷ್ಣಮೂರ್ತಿ, ಡಾ.ಶಿವನಗೌಡ ಪಾಟೀಲ್ ಇತರರಿದ್ದರು.