

ಕೊಪ್ಪಳ: ಪರಾಣ ಕಾಲದಿಂದಲೂ ಕಲೆ&ವಾಸ್ತುಶಿಲ್ಪಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ ಎಂದು ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವಕರ್ಮ ಸ್ವರ್ಗ ಮತ್ತು ಭೂಮಿ ಸೃಷ್ಟಿಸಿದ ದೈವಿಕ ವಾಸ್ತು ಶಿಲ್ಪಿ. ದೇವತೆಗಳ ಅರಮನೆಗಳು, ದೈವಿಕ ಆಯುಧಗಳು ಮತ್ತು ಪ್ರಾಚಿನ ಗ್ರಂಥಗಳಲ್ಲಿ ಉಲ್ಲೇಖಿಸಲಾದ ಅನೇಕ ಮಹತ್ವದ ವಾಸ್ತುಶಿಲ್ಪದ ಅದ್ಭುತಗಳನ್ನು ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ದ್ವಾರಕಾ ಮತ್ತು ಹಸ್ತಿನಾಪುರದ ಪೌರಾಣಿಕ ನಗರಗಳು ಹಾಗೂ ದೇವರುಗಳ ಪೌರಾಣಿಕ ಹಾರುವ ರಥಗಳು ವಿಶ್ವಕರ್ಮರ ಸೃಷ್ಟಿ ಎಂದರು.
ಎಡಿಸಿ ಸಿದ್ರಾಮೇಶ್ವರ ಮಾತನಾಡಿ, ಜಗತ್ತು ಸುಂದರವಾಗಿ ಕಾಣಲು ವಾಸ್ತುಶಿಲ್ಪ ಕಾರಣ. ಯಾವುದೇ ಕಟ್ಟಡದ ವಾಸ್ತುಶಿಲ್ಪ ನೋಡಿದಾಗ ಕಣ್ಮನ ಸೆಳೆಯುತ್ತದೆ. ಅದಕ್ಕೆ ವಿಶ್ವಕರ್ಮರ ಕೊಡುಗೆ ಸಾಧನೆ ನಾವೆಲ್ಲರೂ ಮನಗಾಣಬೇಕು ಎಂದರು.
ಕುಷ್ಟಗಿ ತಾಲೂಕು ಶರಣಸಾಹಿತ್ಯ ಪರಿಷತ್ ಅಧ್ಯಕ್ಷ ನಟರಾಜ ಸೋನಾರ ವಿಶೇಷ ಉಪನ್ಯಾಸ ನೀಡಿದರು. ಕೊಪ್ಪಳದ ಶ್ರೀ ಸಿರಸಪ್ಪಯ್ಯನ ಮಠದ ಸಿರಸಪ್ಪಯ್ಯ ಸ್ವಾಮಿಗಳು ಆರ್ಶಿವಚನ ನೀಡಿದರು. ಕಾರ್ಯಕ್ರಮಕ್ಕು ಮುನ್ನ ಸಿರಸಪ್ಪಯ್ಯನಮಠದಿಂದ ಸಾಹಿತ್ಯ ಭವನವರೆಗೆ ವಿಶ್ವಕರ್ಮ ಭಾವಚಿತ್ರ ಮೆರವಣಿಗೆ ನಡೆಯಿತು. ಸಂಸದ ರಾಜಶೇಖರ ಹಿಟ್ನಾಳ ಮೆರವಣಿಗೆಗೆ ಚಾಲನೆ ನೀಡಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ, ಸಮುದಾಯ ಮುಖಂಡರಾದ ನಾಗೇಶ ಕುಮಾರ್ ಕಂಸಾಳೆ, ದೇವೇಂದ್ರಪ್ಪ ಬಡಿಗೇರ, ಕಾಳಮ್ಮ ಪತ್ತಾರ ಇತರರಿದ್ದರು.