

ಕೊಪ್ಪಳ: ಅಪಘಾತದಲ್ಲಿ ಕಾಲು ಮುರಿದುಕೊಂಡಿದ್ದ ಕೋತಿಗೆ ನಗರದ ಪಾಲಿಕ್ಲಿನಿಕ್ ಪಶು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಸರಿಪಡಿಸಿ ಜೀವ ಉಳಿಸಿದ್ದಾರೆ.
ಕಳೆದ 10 ದಿನಗಳ ಹಿಂದೆ ಕೊಪ್ಪಳದ ಕುಷ್ಟಗಿ ರಸ್ತೆಯಲ್ಲಿ ವಾಹನ ಡಿಕ್ಕಿಯಾಗಿ ಕೋತಿ ಬಲಗಾಲು ಮುರಿದಿದೆ. ರಸ್ತೆಯಲ್ಲಿ ಬಿದ್ದಿದ್ದ ಕೋತಿಯನ್ನು ಪ್ರಯಾಣಿಕರೊಬ್ಬರು ಕರೆತಂದು ಪಶು ವೈದ್ಯರಿಗೆ ನೀಡಿದ್ದಾರೆ. ಗಮನಿಸಿದಾಗ ಒಂದು ಕೈ ಮುರಿದು ಬಹಳ ದಿನವಾಗಿದ್ದು ಕಂಡುಬಂದಿದೆ. ಬಳಿಕ ಬಲಗಾಲು ಮುರಿದಿದ್ದು ಓಡಾಡುವುದಕ್ಕೆ ಕಷ್ಟಪಡುತ್ತಿರುವುದು ತಿಳಿದು ಬಂದಿದೆ. ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಪಶು ವೈದ್ಯರು, ಶಸ್ತ್ರಚಿಕಿತ್ಸೆ ಮಾಡಿ ಕಾಲಿಗೆ ರಾಡ್ ಅಳವಡಿಸಿದ್ದಾರೆ. ಚಿಕಿತ್ಸೆ ಯಶಸ್ವಿಯಾಗಿದ್ದು ಕೋತಿ ಮೊದಲಿನಂತಾಗಿದೆ.
ಆರೋಗ್ಯ ಸುಧಾರಿಸಿದ್ದು ಪಾಲಿ ಕ್ಲಿನಿಕ್ನಲ್ಲಿ ಪಂಜರದಲ್ಲಿ ಹಾಕಿ ಆರೈಕೆ ಮಾಡಲಾಗುತ್ತಿದೆ. ಕಾಲು ಮೊದಲಿನಂತಾಗಿದ್ದು, ಕೋತಿ ಸಹಜವಾಗಿ ಓಡಾಡುತ್ತಿದೆ. ಇನ್ನು 10 ದಿನದ ಆರೈಕೆ ಅವಶ್ಯವಿದ್ದು, ಬಳಿಕ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿ ಕಾಡಿಗೆ ಬಿಡವುದಾಗಿ ವೈದ್ಯರು ತಿಳಿಸಿದರು. ಪಾಲಿ ಕ್ಲಿನಿಕ್ ಉಪನಿರ್ದೇಶಕ ಡಾ.ಎಸ್.ಜಿ.ರೋಣ, ಮುಖ್ಯ ಪಶು ವೈದ್ಯಾಧಿಕಾರಿ ಡಾ.ಚಂದ್ರಶೇಖರ ಜಿ., ಹಿರಿಯ ಪಶು ವೈದ್ಯಾಧಿಕಾರಿ ಡಾ. ಅನಿಲ ಸಿಂದೂರ ಹಾಗೂ ಪಶು ವೈದ್ಯಾಧಿಕಾರಿ ಡಾ.ಯಮನಪ್ಪ ತಂಡ ಶಸ್ತ್ರಚಿಕಿತ್ಸೆ ನಡೆಸಿದೆ.