ಲಸಿಕೆ ಪಡೆಯುವುದು ಮಗುವಿನ ಹಕ್ಕು

district koppal urban health center vaccination
Published on

ಕೊಪ್ಪಳ: ಲಸಿಕೆ ಪಡೆಯುವುದು ಪ್ರತಿ ಮಗುವಿನ ಹಕ್ಕು. ಪಾಲಕರು ತಪ್ಪದೇ ನಿಮ್ಮ ಮಕ್ಕಳಿಗೆ ಲಸಿಕೆ ಹಾಕಿಸಿ ಎಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಹೇಶ್​ ಹೇಳಿದರು.

ನಗರದ 3ನೇ ವಾರ್ಡಿನ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಲಸಿಕಾ ಸಪ್ತಾಹ ದಿನಾಚರಣೆಯಲ್ಲಿ ಮಾತನಾಡಿದರು.

ಪ್ರತಿ ವರ್ಷ ಏ.24ರಿಂದ 30ವರೆಗೆ ವಿಶ್ವ ಲಸಿಕಾ ಸಪ್ತಾಹ ಆಚರಿಸಲಾಗುತ್ತದೆ. ಶಿಶುಗಳಿಗೆ ಕಡ್ಡಾಯವಾಗಿ ಕೆಲ ಲಸಿಕೆ ನೀಡಬೇಕು. ಇದರಿಂದ ವಿವಿಧ ರೋಗಗಳಿಂದ ಮಗು ರಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಂಡಿದ್ದು ಜಾಗೃತಿ ಮೂಡಿಸಲಾಗುತ್ತಿದೆ. ಶಿಶುಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. 12 ಮಾರಕ ರೋಗಗಳು ಬಾರದಂತೆ ಸಮಯಕ್ಕೆ ಸರಿಯಾಗಿ ಲಸಿಕೆ ಹಾಕಿಸಬೇಕು. ಇದರಿಂದ ಶಿಶು ಮರಣ ತಪ್ಪಿಸಬಹುದು. ಗರ್ಭಿಣಿಯರಿಗೆ ಧನುರ್ವಾಯ ವಿರುದ್ಧ ಲಸಿಕೆ ಹಾಕಿಸಬೇಕು. ಶಿಶುಗಳಿಗೆ ಗಂಟಲು ಮಾರಿ, ನಾಯಿಕೆಮ್ಮು, ಧನುರ್ವಾಯ, ಬಾಲಕ್ಷಯ, ಫೋಲಿಯೋ, ಕಾಮಾಲೆ, ನಿಮೋನಿಯಾ, ಧಡಾರ, ರುಬೇಲ್ಲಾ, ರೋಟಾ ವೈರಸ್​, ನಿಮೋಕಾಕಲ್​ ರೋಗಗಳ ವಿರುದ್ಧ ಕಡ್ಡಾಯವಾಗಿ ಲಸಿಕೆ ಹಾಕಿಸುವಂತೆ ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ. ಮಾತನಾಡಿ, ಮಕ್ಕಳು ದೇಶದ ಸಂಪತ್ತು. ಅವರ ಆರೋಗ್ಯ ರಕ್ಷಣೆ ಎಲ್ಲರ ಜವಾಬ್ದಾರಿ. ಮಗುವಿಗೆ ಆರು ತಿಂಗಳವರೆಗೆ ಕೇವಲ ತಾಯಿ ಹಾಲು ಮಾತ್ರ ನೀಡಿ. ನಂತರ ಪೂರ ಪೌಷ್ಠಿಕ ಆಹಾರ ನೀಡಬೇಕು. ಪ್ರತಿ ತಿಂಗಳು ಮಗುವಿನ ತೂಕ ಹೆಚ್ಚಾಗಬೇಕು ಎಂದು ಸಲಹೆ ನೀಡಿದರು.

ಲಿಂಕ್​ವರ್ಕರ್​ ಉದಯಕುಮಾರ, ಆರೋಗ್ಯ ಸುರಾಧಿಕಾರಿ ಅನಿತಾ, ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಕುಮಾರ, ಅಂಗನವಾಡಿ ಕಾರ್ಯಕರ್ತೆ ಪ್ರಭಾವತಿ, ಆಶಾ ಕಾರ್ಯಕರ್ತೆಯರಾದ ಪೂರ್ಣಿಮಾ, ಮಂಜುಳಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net