

ಕೊಪ್ಪಳ: ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಈ ಬಗ್ಗೆ ಜನರಿಗೆ ಹೆಚ್ಚು ಅರಿವು ಮೂಡಿಸಿ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ವಿಶ್ವದಾದ್ಯಂತ ಕ್ಯಾನ್ಸರ್, ಹೃದಯ ಕಾಯಿಲೆ, ಶ್ವಾಸಕೋಶ ತೊಂದರೆ, ಬಾಯಿ ಕ್ಯಾನ್ಸರ್ ಇನ್ನಿತರ ರೋಗಗಳು ಹೆಚ್ಚುತ್ತಿವೆ. ತಂಬಾಕು ಸೇವನೆ ಇವುಗಳಿಗೆ ಕಾರಣವಾಗುತ್ತಿದೆ. ಕಿರಾಣಿ, ಪಾನ್ಶಾಪ್, ಹೋಟೆಲ್ ಮಾಲೀಕರಿಗೆ ಈ ಬಗ್ಗೆ ಜಾಗೃತಿ ಮೂಡಿಸಿ. ಕೊಟ್ಪಾ ನಿಯಮಗಳನ್ನು ಪಾಲಿಸಲು ಸೂಚಿಸಿ. ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ವಲಯ ಗುರುತಿಸಿ. ಆರೋಗ್ಯಾಧಿಕಾರಿಗಳು ನಿಯಮಿತವಾಗಿ ದಾಳಿ ನಡೆಸಿ. ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಿ. ತಾಲೂಕು ಮಟ್ಟದಲ್ಲಿ ತಹಸೀಲ್ದಾರ್ಗಳು ಪ್ರಗತಿ ಪರಿಶೀಲನೆ ನಡೆಸಿ. ಶಿಕ್ಷಣ ಸಂಸ್ಥೆಗಳ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವಂತಿಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆ ನಿಗವಾಗಿಸಿ. ಅಪ್ರಾಪ್ತರಿಗೆ ತಂಬಾಕು ಉತ್ಪನ್ನ ಸಿಗದಂತೆ ನೋಡಿಕೊಳ್ಳಲು ಮಾರಾಟಗಾರರಿಗೆ ಸೂಚಿಸಿ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ಎಸ್.ದರಗದ ಮಾತನಾಡಿ, ತಂಬಾಕು ಮಾರಾಟ ಮತ್ತು ಸೇವನೆ ಕುರಿತು ಇರುವ ಕಾನೂನುಗಳು, ದಂಡ ಮತ್ತು ಶಿಕ್ಷೆಗಳ ಸಂಪೂರ್ಣ ಮಾಹಿತಿ ಜನರಿಗೆ ತಿಳಿಸಿ. ತಂಬಾಕು ಮಾರಾಟ ಮತ್ತು ಸೇವನೆಯ ಮೇಲೆ ಪರಿಣಾಮಕಾರಿ ಬದಲಾವಣೆ ಸಾಧ್ಯ. ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ&-2003ರ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ, ಶಿಶು ಮತ್ತು ತಾಯಿ ಮರಣ ಪ್ರಮಾಣ ತಡೆ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ ವಿಷಯಗಳ ಕುರಿತು ಚರ್ಚೆ ನಡೆಯಿತು.
ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಡಿಎಚ್ಒ ಡಾ.ಟಿ.ಲಿಂಗರಾಜು, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರವಿಂದ್ರ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಪ್ರಾಕಾಶ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ್, ಜಿಲ್ಲಾ ಕ್ಷಯ ರೋಗ ನಿಮೂರ್ಲನಾಧಿಕಾರಿ ಡಾ.ಶಶಿಧರ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ವೆಂಕಟೇಶ, ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿಗಳಾದ ಡಾ.ಈಶ್ವರ ಸವಡಿ, ಡಾ.ರಾಮಾಂಜನೇಯ, ಡಾ.ಆನಂದ, ಡಾ.ಗೌರಿಶಂಕರ, ಡಾ.ಅಂಬರೀಶ್, ಕಿಮ್ಸ್ ತಜ್ಞ ವೈದ್ಯ ಡಾ.ನಾರಾಯಣ ಇತತರಿದ್ದರು.