

ಕೊಪ್ಪಳ: ಪ್ರಾಥಮಿಕ ಹಂತದಲ್ಲೇ ಮಕ್ಕಳ ಕಲಿಕೆಗೆ ಭದ್ರ ಬುನಾದಿ ಹಾಕುವ ಅವಶ್ಯವಿದ್ದು, ಶೈಕ್ಷಣಿಕ ಹಾಗೂ ಮಕ್ಕಳ ಗುಣಾತ್ಮಕ ಶಿಕ್ಷಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ತಿಳಿಸಿದರು.
ನಗರದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಮುನಿರಾಬಾದ್ನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಿಂದ ಪ್ರೌಢಶಾಲಾ ವಿಜ್ಞಾನ ಮತ್ತು ಗಣಿತ ಶಿಕ್ಷಕರು ಮತ್ತು ಜಿಪಿಟಿ ಶಿಕ್ಷಕರಿಗಾಗಿ ನಡೆಯುತ್ತಿರುವ ಐದು ದಿನಗಳ ತರಬೇತಿಯಲ್ಲಿ ಬುಧವಾರ ಮಾತನಾಡಿದರು. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಇಲಾಖೆ ಹತ್ತು ಹಲವು ಯೋಜನೆ ಹಮ್ಮಿಕೊಂಡರೂ ನಿರೀತ ಫಲಿತಾಂಶ ಬರುತ್ತಿಲ್ಲ. ಕೊಪ್ಪಳ ಜಿಲ್ಲೆಯಲ್ಲಿ 7000 ಕ್ಕೂ ಅಧಿಕ ಮಕ್ಕಳಿಗೆ ಕನ್ನಡ ಓದಲು ಬರೆಯಲು ಮತ್ತು ಕನಿಷ್ಠ ಲೆಕ್ಕಾಚಾರ ಮಾಡಲು ಬರುತ್ತಿಲ್ಲ ಎಂಬ ವರದಿ ಬಂದಿತ್ತು. ಸದನದಲ್ಲಿ ಈ ವಿಷಯ ಚರ್ಚೆಯಾಗಿದೆ. ಪ್ರಸ್ತುತ ದಿನಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳಬೇಕಾದರೆ ಮೂಲ ವಿಜ್ಞಾನ ಮತ್ತು ಗಣಿತದಲ್ಲಿ ಆಸಕ್ತಿ ಮೂಡುವಂತೆ ಬೋಧಿಸಬೇಕು ಎಂದು ಕರೆ ನೀಡಿದರು.
ಪ್ರೌಢಶಾಲಾ ಶಿಕ್ಷಕರಿಗೆ ಮುಖ್ಯೋಪಾಧ್ಯಾಯರ ಮತ್ತು ಉಪನ್ಯಾಸಕರ ಬಡ್ತಿ ಪ್ರಕ್ರಿಯೆಗಳಿಗೆ ಸಿದ್ಧತೆಗಳು ನಡೆದಿವೆ. ಪಿ.ಎಸ್.ಟಿ ಶಿಕ್ಷಕರ ಬಡ್ತಿ ವಿಷಯ ಸೇರಿದಂತೆ ಶಿಕ್ಷಕರ ನೇಮಕಾತಿಗಾಗಿ ಒತ್ತಾಯ ಮಾಡಿದ್ದೇನೆ. ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಬಗ್ಗೆ ಇಲಾಖೆ ಸಚಿವರು ಹಾಗೂ ಅಧಿಕಾರಿಗಳ ಜತೆ ಚರ್ಚಿಸಿ ಶೇ.20ರಷ್ಟು ಹೆಚ್ಚುವರಿ ಪಟ್ಟಿ ಮಾಡಿ ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ಕೊರತೆ ನೀಗಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು. ಕೆಪಿಎಸ್ಸಿ ನೇಮಕಾತಿಯಲ್ಲಿ ಯುಪಿಎಸ್ಸಿ ಮಾದರಿ ಅನುಸರಿಸಿ ನೇಮಕಾತಿ ಪ್ರಕ್ರಿಯೆಗಳು ಪಾರದರ್ಶಕವಾಗಿ ನಡೆಸಲು ಸರ್ಕಾರಕ್ಕೆ ಒತ್ತಾಯಿಸುವೆ ಎಂದು ತಿಳಿಸಿದರು.
ನೋಡಲ್ ಅಧಿಕಾರಿ ರಾಜೇಂದ್ರ ಬೆಳ್ಳಿ ಮಾತನಾಡಿ, ಡಯಟ್ನಿಂದ ಶಿಕ್ಷಕರಿಗೆ ಪಿಎಬಿ ಅನುಮೋದಿತ ತರಬೇತಿ ಆಯೋಜಿಸಲಾಗಿದ್ದು, ಎಫ್ಎಲ್ಎನ್, ವಿಷಯಾಧಾರಿತ, ಪೋಕ್ಸೋ, ಮಕ್ಕಳ ಹಕ್ಕುಗಳು, ಮಕ್ಕಳ ರಕ್ಷಣೆ ಸೇರಿದಂತೆ ಹಲವು ವಿಷಯಗಳ ಕುರಿತು ತರಬೇತಿ ನೀಡಲಾಗುತ್ತಿದೆ. ಶಿಕ್ಷಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ವಿಜ್ಞಾನ ಕೇಂದ್ರದ ಕ್ಯೂರೇಟರ್ ಮೈಲಾರಪ್ಪ ಗುಡ್ಲಾನೂರು, ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಎಸ್.ಬಿ.ಕುರಿ, ಹೇಮಣ್ಣ ಕವಲೂರು, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೇವೇಂದ್ರಪ್ಪ ರ್ಜಿಲಿ, ಶಿಕ್ಷಕರಾದ ಕಾಸೀಮಸಾಬ, ಶೇಖರ್ ಅಂಕದ ಇತರರಿದ್ದರು.