ಹಿಂಗಾರು ಬೆಳೆಗೆ ನೀರು ಕೊಡಲಾಗದು, ಸಚಿವ ತಂಗಡಗಿ ಸ್ಪಷ್ಟನೆ

3nl9LsRe
Published on

ಕೊಪ್ಪಳ: ತಾಲೂಕಿನ ಮುನಿರಾಬಾದ್ ತುಂಗಭದ್ರಾ ಜಲಾಶಯದಿಂದ ಹಿಂಗಾರು ಬೆಳೆಗೆ ನೀರು ಕೊಡಲು ಸಾಧ್ಯವಿಲ್ಲ. ಮುಂಗಾರು ಆರಂಭದಲ್ಲೇ ಈ ವರ್ಷಕ್ಕೆ ಕೇವಲ ಒಂದು ಬೆಳೆಗೆ ನೀರು ಎಂದು ಕೇಂದ್ರ ಜಲ ಆಯೋಗಾ ಹಾಗೂ ಟಿಬಿ ಬೋರ್ಡ್ ನಿರ್ಧಾರ ಕೈಗೊಂಡಿದೆ ಎಂದು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಆಗಿರುವ ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ನಗರಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಎರಡನೇ ಬೆಳೆಗೆ ನೀರು ಕೊಡುವಂತೆ ವಿಪಕ್ಷದವರು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ವಾಟರ್ ಬೋರ್ಡ್ ಒಂದೇ ಬೆಳೆಗೆ ನೀರು ಹರಿಸಲು ನಿರ್ಧರಿಸಿದೆ. ನಾನು ನಿರ್ಧರಿಸಿದ್ದಲ್ಲ. ಕೇಂದ್ರ ಸರ್ಕಾರ ಇದನ್ನು ಮಾಡಿದೆ. ಜನರ ದಾರಿ ತಪ್ಪಿಸುವ ಬದಲು ಸೆಂಟ್ರಲ್ ಬೋರ್ಡ್ ಗೆ ಮನವಿ ಮಾಡಿ ನೀರು ಕೊಡಿಸಿ. ನಾವೂ ಒತ್ತಾಯ ಮಾಡುತ್ತೇವೆ. ನಮಗೆ ನೀರು ಕೊಡಬಾರದೆಂದ ಉದ್ದೇಶವಿಲ್ಲ. ಸದ್ಯ ಜಲಾಶಯಕ್ಕೆ ನೀರು ಬರುತ್ತಿದೆ ನಿಜ. ಒಂದು ಬೆಳೆಗೆ 60 ಟಿಎಂಸಿ ಅಡಿ ನೀರು ಬೇಕು. 80ರಲ್ಲಿ 52 ಟಿಎಂಸಿ ನಮ್ಮ ಪಾಲು. ಅದರಲ್ಲಿ ಆವಿ ಪ್ರಮಾಣ, ಕುಡಿವ ನೀರು, ಸಿಸ್ಟಂಲಾಸ್ ಸೇರಿ ಇನ್ನಿತರ ಕಾರಣಗಳಿಗೆ 10 ಟಿಎಂಸಿ ಲಾಸ್ ಆಗಲಿದೆ. ನವೆಂಬರ್ ಬಳಿಕ ಆಂಧ್ರ ತನ್ನ ಪಾಲಿನ ನೀರು ಬಿಡುಗಡೆಗೆ ಬೇಡಿಕೆ ಸಲ್ಲಿಸಿದೆ ಎಂದರು.

ನವೆಂಬರ್ ಅಂತ್ಯದವರೆಗೆ ಕಾಲುವೆಗೆ ನೀರು ಹರಿಸಬೇಕಿದೆ. ಮಾಜಿ ಸಚಿವ ವೆಂಕಟರಾವ್ ನಾಡಗೌಡರಿಗೆ ಎಲ್ಲ ಗೊತ್ತಿದೆ‌. ಹೀಗಿದ್ದರೂ ಜನರ ದಾರಿ ತಪ್ಪಿಸುವ ಕೆಲಸ ಮಾಡಬಾರದು. ಬಿಜೆಪಿ ಬಸವರಾಜ ದಢೇಸುಗೂರಿಗೆ ಲೆಕ್ಕಪತ್ರ ಗೊತ್ತಾಗಲ್ಲ. ಆಂಧ್ರ, ತೆಲಂಗಾಣ ಸರ್ಕಾರಕ್ಕೂ ನಾವು ಮನವಿ ಮಾಡುತ್ತೇವೆ. ಕೇಂದ್ರ ಸಚಿವ ಕುಮಾರಸ್ವಾಮಿ ನೀರು ಬಿಡಿಸುವ ಕೆಲಸ ಮಾಡಲಿ. ಕೊರತೆ ನಡುವೆಯೂ ನೀರು ಬಿಟ್ಟರೆ ಫೆಬ್ರವರಿಯಲ್ಲಿ ಒಂದೊಮ್ಮೆ ನೀರು ಸಿಗದಿದ್ದರೆ ಏನ್ ಮಾಡುವುದು ? ನ.5ರಂದು ವಾಟರ್ ರಿವಿವ್ ಮೀಟಿಂಗ್ ಇದೆ. ಅದರಲ್ಲಿ ಏನಾಗಲಿದೆ ನೋಡೊಣ. ನ.9 ಅಥವಾ 10 ರಂದು ಡಿಸಿಎಂ ಅಧ್ಯಕ್ಷತೆಯಲ್ಲಿ ನಾವೊಂದು ಸಭೆ ಮಾಡುವ ಯೋಜನೆ ಇದೆ. ಬೋರ್ಡ್ 21ಕ್ಕೆ ಮೀಟಿಂಗ್ ಕರೆದಿದೆ. ಅಷ್ಟರಲ್ಲಿ ನಾವೊಂದು ಮೀಟಿಂಗ್ ಮಾಡಿ ಪರ್ಯಾಯ ಮಾರ್ಗ ಹುಡುಕೋಣ ಎಂದು ಸಮಜಾಯಿಷಿ ನೀಡಿದರು.

ಡಿಸೆಂಬರ್ ನಿಂದ ಗೇಟ್ ಅಳವಡಿಕೆ

ಟಿಬಿ ಬೋರ್ಡ್ ಡಿಸೆಂಬರ್ ಮೊದಲ ವಾರದಿಂದ ಗೇಟ್ ಕೂಡಿಸಲು ಯೋಜನೆ ಹಾಕಿಕೊಂಡಿದೆ. ಒಂದೊಂದು ಗೇಟ್ ತೆರವು ಮಾಡಿ ಕೂಡಿಸಲು ಕನಿಷ್ಠ 15 ದಿನ ಬೇಕಾಗಲಿದೆ. ತೆರವು ಹಾಗೂ ಕೂಡಿಸಲು ಪ್ರತ್ಯೇಕ ತಂಡ ಮಾಡಲು ನಾವು ಮನವಿ ಮಾಡಿದ್ದೇವೆ. ಆರು ತಿಂಗಳಲ್ಲಿ ಎಲ್ಲ‌ಗೇಟ್ ಕೂಡಿಸಲು ಸಮಯ ಕೇಳಿದ್ದಾರೆ. ಡಿಸೆಂಬರ್ ಒಳಗೆ ಜಲಾಶಯ ಮಟ್ಟ 1613 ಅಡಿಗೆ ಬಂದರೆ ಕೆಲಸ ಆರಂಭವಾಗಲಿದೆ. ಇಲ್ಲದಿದ್ದರೆ ಕಾಲುವೆ, ನದಿ ಮೂಲಕ ನೀರು‌ಹರಿಸಿ ಕೆಲಸ ಆರಂಭಿಸುತ್ತೇವೆ. ಎಲ್ಲಕ್ಕಿಂತ ಡ್ಯಾಂ ಭದ್ರತೆ ಮುಖ್ಯ ಎಂಬುದನ್ನು ವಿಪಕ್ಷಗಳು ಅರಿಯಬೇಕೆಂದು ಬೇಸರ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net