

ವಿಜಯವಾಣಿ ವಿಶೇಷ ಕೊಪ್ಪಳ : ತ್ರಿವಳಿ ರಾಜ್ಯದ ಅನ್ನದ ಬಟ್ಟಲು ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಅಳವಡಿಕೆ ಈವರ್ಷವೂ ಅನುಮಾನ ಮೂಡಿಸಿದೆ. ಟಿಬಿ ಬೋರ್ಡ್ ವಿಳಂಬ ನೀತಿಯಿಂದ ಟೆಂಡರ್ ಹಂತದಲ್ಲೇ ದಿನಗಳು ಉರುಳುತ್ತಿವೆ. ರಾಜ್ಯಾದ್ಯಂತ ವರ್ಷಧಾರೆ ಕಾರಣ ಜಲಾಶಯಕ್ಕೆ ಒಳ ಹರಿವು ಹೆಚ್ಚಿದ್ದು ಸಂಗ್ರಹ ಮಟ್ಟ ಈಗಾಗಲೇ 10 ಟಿಎಂಸಿ ಅಡಿ ತಲುಪಿದೆ.
2024ರ ನವೆಂಬರ್ 10ರಂದು 19ನೇ ಕ್ರಸ್ಟ್ ಗೇಟ್ ಕಳಚಿ ಬಿದ್ದಿದೆ. ವಾರದಲ್ಲಿ ಸ್ಟಾಪ್ಲಾಗ್ ಗೇಟ್ ಅಳವಡಿಸಿದ ತಜ್ಞ ಕನ್ನಯ್ಯ ನಾಯ್ಡು ತಂಡ ನೀರು ಉಳಿಕೆ ಮಾಡಿದೆ. ದುರ್ಟನೆ ನಡೆವ ವರ್ಷ ಮುಂಚೆಯೇ ಕ್ರಸ್ಟ್ ಗೇಟ್ಗಳನ್ನು ಬದಲಾಯಿಸುವಂತೆ ತಜ್ಞರ ಸಮಿತಿ ವರದಿ ನೀಡಿದೆ. ಗೇಟ್ ತುಂಡಾಗಿ ಏಳು ತಿಂಗಳು ಕಳೆದರೂ ಕೇವಲ ತಾಂತ್ರಿಕ ವರದಿ ಪಡೆಯುವಲ್ಲಿ ಬೋರ್ಡ್ ಕಾಲಹರಣ ಮಾಡಿದೆ. ಕಳೆದ ವಾರ ಟೆಂಡರ್ ಪ್ರಕ್ರಿಯೆ ಶುರು ಮಾಡಿದ್ದು 19ನೇ ಗೇಟ್ ಒಂದಕ್ಕೆ 1.6 ಕೋಟಿ ರೂ.ಗೆ ಗುಜರಾತನ ಹಾರ್ಡವೇರ್ ಟೂಲ್ಸ್ ಆ್ಯಂಡ್ ಮಷಿನರಿ ಪ್ರಾಜೆಕ್ಟ್ ಕಂಪನಿ ಟೆಂಡರ್ ಪಡೆದಿದೆ. ಬಾಕಿ 32 ಗೇಟ್ಗಳಿಗೂ 80 ಕೋಟಿ ರೂ.ನಲ್ಲಿ ಟೆಂಡರ್ ಪ್ರಕ್ರಿಯೆ ಶುರು ಮಾಡಿದೆ.
ಕಂಪನಿ ಸಲ್ಲಿಸಿದ ಗೇಟ್ ವಿನ್ಯಾಸವನ್ನು ಆಂಧ್ರಪ್ರದೇಶದ ಸೆಂಟ್ರಲ್ ಡಿಸೈನ್ ಆರ್ಗನೈಸೇಷನ್ ತಜ್ಞರ ತಂಡ ಪರಿಶೀಲಿಸಿ ಒಪ್ಪಿದೆ. ಆದರೆ, ಕೇಂದ್ರ ಜಲ ಆಯೋಗದ ಅನುಮತಿ ಪಡೆಯುವಂತೆ ಸಲಹೆ ನೀಡಿದೆ. ಅನುಮೋದನೆ ದೊರೆತು ಗೇಟ್ ಸಿದ್ಧಗೊಳ್ಳಲು ಕನಿಷ್ಠ ಒಂದೆರಡು ತಿಂಗಳು ಕಾಲವಕಾಶ ಬೇಕಿದೆ. ಹೀಗಾಗಿ ಈ ವರ್ಷ ಗೇಟ್ ಅಳವಡಿಕೆ ಅನುಮಾನ ದಟ್ಟವಾಗಿಸುತ್ತಿದೆ. ಮತ್ತೊಂದೆಡೆ ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾಗಿದೆ. ಮುಂದಿನ ವಾರ ಕಾಲ ಭಾರಿ ಮಳೆ ಆಗುವುದಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬುಧವಾರ ಬೆಳಗ್ಗೆ ಜಲಾಶಯಕ್ಕೆ 9,378 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. 10 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು ಜಲಮಟ್ಟ ಏರಿಕೆಯಾಗುತ್ತಿದೆ.
1613 ಕ್ರಸ್ಟ್ ಗೇಟ್ ಮಟ್ಟ
ಜಲಾಶಯದ 1613 ಅಡಿಗೆ ಕ್ರಸ್ಟ್ ಗೇಟ್ ಅಳವಡಿಸಲಾಗಿದೆ. ಸದ್ಯ 1588 ಅಡಿಗೆ ನೀರು ಶೇಖರಣೆಯಾಗಿದೆ. ಇನ್ನು 25 ಅಡಿಯಷ್ಟು ನೀರು ಬಂದಲ್ಲಿ ಗೇಟ್ ಹಂತಕ್ಕೆ ಬರಲಿದೆ. ಒಳ ಹರಿವು ಏರಿಕೆಮಟ್ಟದಲ್ಲಿದ್ದು ಮತ್ತಷ್ಟು ಹೆಚ್ಚಿದಲ್ಲಿ ಬೇಗನೇ ಜಲಾಶಯ ಭರ್ತಿಯಾಗುವ ಸಾಧ್ಯತೆ ದಟ್ಟವಾಗಿಸಿದೆ. ಸ್ಟಾಪ್ಲಾಗ್ ಗೇಟ್ ತಾತ್ಕಾಲಿಕವಾಗಿದ್ದು, 33 ಗೇಟ್ಗಳು ಅಲ್ಲದಿದ್ದರೂ 19ನೇ ಗೇಟ್ ಒಂದಾದರೂ ಬದಲಿಸಿದಲ್ಲಿ ರೈತರಿಗೆ ಅನುಕೂಲವಾಗಲಿದೆ. ತಜ್ಞರು ಈ ವರ್ಷ ಪೂರ್ಣ ಜಲಾಶಯ ತುಂಬಿಸದಂತೆ ಎಚ್ಚರಿಕೆ ನೀಡಿದ್ದಾರೆ. ನೀರು ಕ್ರಸ್ಟ್ ಗೇಟ್ ಹಂತ ತಲುಪುವಷ್ಟರಲ್ಲಿ ಗೇಟ್ ಅಳವಡಿಕೆ ಕಷ್ಟಸಾಧ್ಯ. ಹೀಗಾಗಿ ಈ ವರ್ಷ ನೀರು ದೊರೆಯುವುದಾ ಇಲ್ಲವೆಂಬ ಆತಂಕ ಹೆಚ್ಚಿಸಿದೆ.
ಒಂದು ಅಡಿ ಹೆಚ್ಚಿಸಿದ್ದು ಯಾಕೆ ?
ಕಳೆದ ವರ್ಷ ಜಲಾಶಯದ ಎಲ್ಲ ಗೇಟ್ಗಳನ್ನು ಒಂದು ಅಡಿ ಹೆಚ್ಚಿಸಲಾಗಿದೆ. ಹಿಂದಿನ ವರ್ಷವಷ್ಟೇ ಗೇಟ್ಗಳು 50 ವರ್ಷವಾಗಿದ್ದು ಬದಲಿಸಬೇಕೆಂದು ವರದಿ ಸಲ್ಲಿಕೆಯಾಗಿದೆ. ಹೀಗಿದ್ದರೂ 1 ಅಡಿ ಹೆಚ್ಚಳ ಮಾಡಲಾಗಿದೆ. ಇದಾದ ಮೇಲೆ ಜಲಾಶಯಕ್ಕೆ ನೀರು ಹರಿದು ಬಂದಾಗ 19ನೇ ಗೇಟ್ ಕಳಚಿಕೊಂಡಿದ್ದು ಅನುಮಾನ ಮೂಡಿಸಿದೆ. ಸಿಡಬ್ಲೂಸಿ ಸಲಹೆಯಂತೆ ಎತ್ತರ ಹೆಚ್ಚಳ ಮಾಡಿದ್ದಾಗಿ ಬೋರ್ಡ್ ಮೂಲಗಳು ಹೇಳುತ್ತಿವೆ. ಜಲಾಶಯದ ಮೇಲೆ ಬೀಸುವ ಗಾಳಿಯಿಂದ ನೀರು ಹೊರ ಚೆಲ್ಲುವುದನ್ನು ತಡೆಯಲು ಈ ಕ್ರಮವೆಂದು ಹೇಳಲಾಗುತ್ತಿದೆ. ಹೀಗಿದ್ದರೆ ಜಲಾಶಯ ನಿರ್ಮಾಣವಾದಾಗಿನಿಂದ ಈವರೆಗೆ ಏಕೆ ಈ ಕ್ರಮವಾಗಲಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ. ಇದಕ್ಕೆ ಬೋರ್ಡ್ ಸಮರ್ಪಕ ಉತ್ತರ ನೀಡಬೇಕಿದೆ.