

ಕೊಪ್ಪಳ: ತುಂಗಭದ್ರಾ ಜಲಾಶಯದ 18 ಗೇಟ್ಗಳ ಸ್ಥಿತಿ ಗಂಭೀರವಾಗಿದೆ. ಅದರಲ್ಲೂ 6 ಗೇಟ್ ಬೆಂಡ್ ಆಗಿದ್ದು, ಅವುಗಳ ಮೂಲಕ ನದಿಗೆ ನೀರು ಬಿಡುಗಡೆ ಸಾಧ್ಯವಾಗುತ್ತಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕ್ರಸ್ಟ್ ಗೇಟ್ಗಳ ಗುಣಮಟ್ಟ ಬಗ್ಗೆ ಡ್ಯಾಂ ಸೇಫ್ಟಿ ಕಮಿಟಿ ವರದಿ ನೀಡಿದೆ. ಒಟ್ಟು 33 ಗೇಟ್ಗಳಲ್ಲಿ ಒಂದೊಂದೇ ಗೇಟ್ ಸಾಮರ್ಥ್ಯ ಅಳೆಯಲಾಗಿದೆ. ವರದಿ ಪ್ರಕಾರ ಸದ್ಯ 18 ಗೇಟ್ ಬಹುತೇಕ ಸವೆದಿವೆ. ತಕ್ಷಣಕ್ಕೆ ಬದಲಾಯಿಸಬೇಕಿದೆ. 19ನೇ ಗೇಟ್ ಸಿದ್ಧಗೊಂಡಿದ್ದು ಅಳವಡಿಸಬೇಕಿದೆ. ಬಾಕಿ ಗೇಟ್ ಟೆಂಡರ್ ಮುಗಿದಿದೆ. ಕನಿಷ್ಠ 8 ತಿಂಗಳಾದರೂ ಬೇಕೆಂದು ಕಂಪನಿ ತಿಳಿಸಿದೆ.
11, 18, 20, 24, 27,28 ಸಂಖ್ಯೆ ಗೇಟ್ ಬೆಂಡ್ ಆಗಿವೆ. ಅವುಗಳನ್ನು ಆಪರೇಟ್ ಮಾಡುತ್ತಿಲ್ಲ. ಸಮಸ್ಯೆ ಆಗದಿರಲೆಂದು ಹಾಗೇ ಬಿಡಲಾಗಿದೆ. 4ನೇ ಗೇಟ್ ಸಹ ಬೆಂಡ್ ಇದೆ. ಆದರೆ ಎರಡು ಅಡಿವರೆಗೆ ಎತ್ತರಿಸಬಹುದು. ಬಾಕಿ ಗೇಟ್ ಗಳ ಮೂಲಕವೇ ನೀರು ಹೊರ ಹಾಕಲಾಗುತ್ತಿದೆ. ಅದೇ ಕಾರಣಕ್ಕೆ ಕೇವಲ 80 ಟಿಎಂಸಿ ಅಡಿ ನೀರು ಸಂಗ್ರಹಿಸಲಾಗುತ್ತಿದೆ. ಒಂದನೇ ಬೆಳೆಗೆ ನೀರಿನ ಕೊರತೆ ಇಲ್ಲ. ಬೋರ್ಡ್ ಸಹ ಒಂದು ಬೆಳೆಗೆ ನೀರು ಕೊಡಲು ನಿರ್ಧರಿಸಿದೆ. ರೈತರು ಸಹಕರಿಸಬೇಕು. 1.5 ಲಕ್ಷ ಕ್ಯೂಸೆಕ್ ಗಿಂತ ಅಧಿಕ ನೀರು ಹೊರಹಾಕುವುದು ಸಮಸ್ಯೆ ಇದೆ. ಹೀಗಾಗಿ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ ಎಂದರು.