

ಕೊಪ್ಪಳ: ತಾವರಗೇರಾ ಪೊಲೀಸ್ಠಾಣೆ ವ್ಯಾಪ್ತಿಯ ತಾವರಗೇರಾ&ಮುದಗಲ್ ರಾಜ್ಯ ಹೆದ್ದಾರಿಯಲ್ಲಿನ ಪ್ಲಾಸ್ಟಾ ಪಿವಿಸಿ ಪೈಪ್ಫ್ಯಾಕ್ಟರಿಯಲ್ಲಿ ಜು.19ರಂದು ಮಷೀನ್ ಹಾಗೂ ಇತರ ಸಾಮಾನು ಕದ್ದ ನಾಲ್ವರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 1.49 ಲಕ್ಷ ರೂ. ಬೆಲೆಯ ಸಾಮಾನುಗಳನ್ನು ವಶಕ್ಕೆ ಪಡೆದಿದ್ದಾರೆ.
ರಾಯಚೂರು ಜಿಲ್ಲೆ, ಲಿಂಗಸ್ಗೂರು ತಾಲೂಕಿನ ಹನಕುಂಟಿ ಗ್ರಾಮದ ಅಮರೇಶ ಛಲವಾದಿ, ಹನುಮಂತ ಕಮಲದಿನ್ನಿ, ಶರಣಪ್ಪ ಬಾರಕೇರ, ಹೊಳೆಯಪ್ಪ ಛಲವಾದಿ ಬಂಧಿತರು. ಎಲ್ಲರೂ ಖಾಸಗಿ ವಾಹನ ಚಾಲಕರು. ಬೊಲೆರೊ ಪಿಕ್ ಅಪ್ ವಾಹನದಲ್ಲಿ ಬಂದ ಕಳ್ಳರು ಫ್ಯಾಕ್ಟರಿಯಲ್ಲಿನ ಮಷಿನ್ ಹಾಗೂ ಇನ್ನಿತರ ಸಾಮಾನುಗಳನ್ನು ಕದ್ದಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶೇಷ ತಂಡ ರಚಿಸಿ ಪತ್ತೆಗೆ ಮುಂದಾಗಿದ್ದರು. ಅನುಮಾನಾಸ್ಪದವಾಗಿ ಕಂಡ ಚಾಲಕರನ್ನು ವಿಚಾರಿಸಿದಾಗ ಕಳ್ಳತನ ವಿಷಯ ಹೊರ ಬಂದಿದೆ.
ಆರೋಪಿಗಳಿಂದ 1.49 ಲಕ್ಷ ರೂ. ಮೊತ್ತದ ಮಷೀನ್ ಹಾಗೂ ಸಾಮಾನುಗಳು, 4 ಲಕ್ಷ ರೂ. ಮೌಲ್ಯದ ಬೊಲೆರೊ ಪಿಕ್ಅಪ್ ವಾಹನ ವಶಕ್ಕೆ ಪಡೆಯಲಾಗಿದೆ. ಕಳ್ಳತನ ಪ್ರಕರಣ ಪತ್ತೆ ಮಾಡಿದ ಪೊಲೀಸ್ ಸಿಬ್ಬಂದಿಗೆ ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ ವಿಶೇಷ ಬಹುಮಾನ ಘೋಷಿಸಿದ್ದಾರೆ.