ಅಕ್ರಮ ರೆಸಾರ್ಟ್​ಗಳ ವಿರುದ್ಧ ಕ್ರಮ ಕೈಗೊಳ್ಳಿ

district koppal tahasildar meeting illegale resorts home stays
Published on

ಕೊಪ್ಪಳ: ತಾಲೂಕು ವ್ಯಾಪ್ತಿಯಲ್ಲಿ ನೋಂದಣಿ ಇಲ್ಲದ ರೆಸಾರ್ಟ್​, ಹೋಮ್​ ಸ್ಟೇಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್​ ವಿಠ್ಠಲ್​ ಚೌಗಲಾ ಸೂಚಿಸಿದರು.

ನಗರದ ತಹಸೀಲ್ದಾರ್​ ಕಚೇರಿ ಸಭಾಂಗಣದಲ್ಲಿ ತಾಲೂಕು ವ್ಯಾಪ್ತಿಯ ಅಕ್ರಮ ರೆಸಾರ್ಟ್​, ಹೋಮ್​ ಸ್ಟೇ ತೆರವು ಬಗ್ಗೆ ಮಂಗಳವಾರ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.

ದಾಖಲೆ ಇಲ್ಲದಿರುವ ರೆಸಾರ್ಟ್​, ಹೋಮ್​ ಸ್ಟೇಗಳ ವಿರುದ್ಧ ಕ್ರಮಕ್ಕೆ ತಾಲೂಕು ಮಟ್ಟದಲ್ಲಿ ತಂಡ ರಚಿಸಲಾಗಿದೆ. ಸೂಕ್ತ ಪರವಾನಗಿ ಇಲ್ಲದೆ ಹೋಮ್​ ಸ್ಟೇ, ರೆಸಾರ್ಟ್​ ನಡೆಸುತ್ತಿರುವ ಮಾಹಿತಿ ಇದೆ. ಕಂದಾಯ, ಪಂಚಾಯತ್​ರಾಜ್​, ಪ್ರವಾಸೋದ್ಯಮ, ಅಬಕಾರಿ, ಪೊಲೀಸ್​, ಅರಣ್ಯ, ಜೆಸ್ಕಾಂ ಇಲಾಖೆ ಅಧಿಕಾರಿಗಳು ಸಮನ್ವಯದೊಂದಿಗೆ ಕೆಲಸ ಮಾಡಿ. ಎಲ್ಲ ರೆಸಾರ್ಟ್​, ಹೋಮ್​ ಸ್ಟೇಗಳ ದಾಖಲೆ ಪರಿಶೀಲಿಸಿ. ಅಧಿಕೃತ, ಅನಧಿಕೃತ ಪಟ್ಟಿ ಮಾಡಿ. ರೆಸಾರ್ಟ್​, ಹೋಮ್​ ಸ್ಟೇ ಮಾಲೀಕರೊಂದಿಗೆ ಸಭೆ ನಡೆಸಿ. ಸಾರ್ವಜನಿಕರ ಸುರಕ್ಷತೆ, ಪ್ರವಾಸಿಗರ ರಕ್ಷಣೆ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಬೇಕಿದೆ ಎಂದರು.

ಗ್ರಾಪಂ ಮಟ್ಟದಲ್ಲಿ ಕಂದಾಯ, ಪಂಚಾಯತ್​ರಾಜ್​, ಪ್ರವಾಸೋದ್ಯಮ, ಅಬಕಾರಿ, ಪೊಲೀಸ್​, ಅರಣ್ಯ, ಜೆಸ್ಕಾಂ ಇಲಾಖೆ ಅಧಿಕಾರಿಗಳನ್ನು ಸೇರಿಸಿ ತಂಡ ರಚಿಸಿ. ಪ್ರವಾಸೋದ್ಯಮ ಅಧಿಕಾರಿಗಳು ಎಲ್ಲ ರೆಸಾಟ್​, ಹೋಮ್​ ಸ್ಟೇಗಳಿಗೆ ನೋಟಿಸ್​ ಜಾರಿ ಮಾಡಿ. ಒಂದು ವಾರದಲ್ಲಿ ದಾಖಲೆ ನೀಡದ ರೆಸಾರ್ಟ್​, ಹೋಮ್​ ಸ್ಟೇ ತೆರವು ಮಾಡಿ. ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನಿರ್ದೇಶಿಸಿದರು.

ತಾಪಂ ಇಒ ದುಂಡಪ್ಪ ತುರಾದಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ, ಅಬಕಾರಿ, ಪೊಲೀಸ್​, ಅರಣ್ಯ, ಜೆಸ್ಕಾಂ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net