

ಕೊಪ್ಪಳ: ಇದೇ ಮೇ 7ರಂದು ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದೆ. ನಗರವಾಸಿಗಳು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಬೇಕು ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಮನವಿ ಮಾಡಿದರು.
ನಗರದ ಬಿ.ಟಿ.ಪಾಟೀಲ್ ನಗರದ 133-, 149-, 150, -151, -153 ಮತಗಟ್ಟೆ ವ್ಯಾಪ್ತಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಯುವಜನರು, ಹೊಸ ಮತದಾರರು, ಹಿರಿಯ ನಾಗರಿಕರು, ಮಹಿಳೆಯರು ವಿಶೇಷ ಚೇತನರಿಗೆ ಮತಗಟ್ಟೆಗಳಲ್ಲಿ ನೆರಳಿನ ವ್ಯವಸ್ಥೆ, ಕುಡಿವ ನೀರು, ಗಾಲಿಕುರ್ಚಿ, ರ್ಯಾಂಪ್, ಶೌಚಗೃಹ ಸೇರಿ ಮೂಲ ಸೌಕರ್ಯ ಒದಗಿಸಲಾಗುವುದು. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಹತ್ತರ ಕೆಲಸ. ಇದರಿಂದ ದೇಶದ ಭವಿಷ್ಯ ನಿರ್ಮಾಣವಾಗಲಿದೆ. ನಗರ ವಾಸಿಗಳು ಮತದಾನದಿಂದ ದೂರ ಉಳಿಯದಿರಿ. ನೀವು ಮತ ಹಾಕುವುದರೊಂದಿಗೆ ನಿಮ್ಮ ಅಕ್ಕ&ಪಕ್ಕದವರಿಗೂ ತಿಳಿಸಿ. ನಗರ ಪ್ರದೇಶದಲ್ಲಿ ಈ ಬಾರಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಸಹಕರಿಸಿ ಎಂದು ಕೇಳಿಕೊಂಡರು.
ವಾರ್ಡ್ ಹಿರಿಯ ಮತದಾರ ಸುರೇಶ ನಾಡಿಗೇರ ಮಾತನಾಡಿ, ನಮ್ಮದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮತದಾನ ಹಕ್ಕಿದೆ. ದೇಶದ ಭವಿಷ್ಯಕ್ಕಾಗಿ ನಿಮ್ಮ ಮತ ಅಮೂಲ್ಯ. ಸುಭದ್ರ ಭವಿಷ್ಯಕ್ಕಾಗಿ ಪ್ರತಿಯೊಬ್ಬರೂ ಮತ ಚಲಾಯಿಸಿ. ಯಾವುದೇ ಆಸೆ, ಆಮೀಷಕ್ಕೆ ಒಳಗಾಗದೆ ಕಡ್ಡಾಯವಾಗಿ ಮತದಾನ ಮಾಡಿ ಎಂದು ಪ್ರೋತ್ಸಾಹಿಸಿದರು.
ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ್ ಸಹ ಮತದಾನ ಜಾಗೃತಿ ಮೂಡಿಸಿದರು. ಹಲವು ಹಿರಿಯರು ಅಭಿಪ್ರಾಯ ಹಂಚಿಕೊಂಡರು. ವಿವಿಧ ಇಲಾಖೆಗಳ ನಿವೃತ್ತ ನೌಕರು, ಹಿರಿಯ ನಾಗರಿಕರು, ಮಹಿಳೆಯರು, ಯುವ-ಮತದಾರರು, ವಿಶೇಷ ಚೇತನರು, ನಗರಸಭೆ ಸಿಬ್ಬಂದಿ ಇದ್ದರು.