

ಕೊಪ್ಪಳ: ಹಲವು ಆಮಿಷಗಳನ್ನು ಒಡ್ಡಿ ಅಧಿಕಾರಕ್ಕೆ ಬಂದ ಕೇಂದ್ರ ಬಿಜೆಪಿ, ರಾಜ್ಯ ಕಾಂಗ್ರೆಸ್ ಸರ್ಕಾರ ಜನಪರ ಆಡಳಿತ ನೀಡುವಲ್ಲಿ ವಿಲವಾಗಿವೆ. ಈ ಬಗ್ಗೆ ದೇಶದ ಜನರು ಎಚ್ಚೆತ್ತುಕೊಳ್ಳಬೇಕಿದೆ ಎಂದು ಎಸ್ಯುಸಿಐ (ಕಮ್ಯುನಿಷ್ಟ) ರಾಜ್ಯ ಸಮಿತಿ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ ಹೇಳಿದರು.
ನಗರದ ಕನಕದಾಸ ವೃತ್ತದಲ್ಲಿ ಎಸ್ಯುಸಿಐನಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಆಂದೋಲನದಲ್ಲಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಕಳೆದ 9 ವರ್ಷದಲ್ಲಿ ದೇಶ ಅಭಿವೃದ್ಧಿಯಾಗಿದೆ ಎನ್ನುತ್ತಿದ್ದಾರೆ. ಬದಲಿಗೆ ಅದಾನಿ, ಅಂಬಾನಿಗಳಂತ ಬಂಡವಾಳಶಾಹಿಗಳು ಅಭಿವೃದ್ಧಿಯಾಗಿದೆ.
ಕಾಪೋರ್ರೇಟ್ ವಲಯದ 20 ಲಕ್ಷ ಕೋಟಿ ರೂ. ಸಾಲ ಮನ್ನಾ ಆಗಿದೆ. ಜನರು ಬೆಲೆ ಏರಿಕೆ, ಶಿಕ್ಷಣ, ಆರೋಗ್ಯದ ವ್ಯಾಪಾರೀಕರಣಕ್ಕೆ ಬೇಸತ್ತಿದ್ದಾರೆ. ನಿರುದ್ಯೋಗ ಹೆಚ್ಚಿದೆ. ಸಾಮಾನ್ಯರ ಮೇಲೆ ತೆರಿಗೆ ಹೆಚ್ಚಿದೆ. ಮೋದಿ ಅಧಿಕಾರಕ್ಕೆ ಬಂದಾಗ ದೇಶದ ಪ್ರತಿಯೊಬ್ಬ ನಾಗರಿಕನ ಮೇಲಿದ್ದ ಸಾಲ 40 ಸಾವಿರ ರೂ. ಈಗ 1.40 ಲಕ್ಷ ರೂ. ಆಗಿದೆ.
ಗ್ಯಾರಂಟಿ ಹೆಸರಿನಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಎಲ್ಲರಿಗೂ ಯೋಜನೆ ತಲುಪಿಸಿಲ್ಲ. ಗ್ಯಾರಂಟಿ ನೆಪದಲ್ಲಿ ಶಿಕ್ಷಣ, ಆರೋಗ್ಯ, ಕುಡಿವ ನೀರು ಮುಂತಾದ ಮೂಲಭೂತ ಸೇವೆಗಳು ಸಂಪೂರ್ಣ ನೆಲಕಚ್ಚಿವೆ.
ಯಾವುದೇ ಜನಪರ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುತ್ತಿಲ್ಲ. ತೀವ್ರ ಬರಗಾಲದ ಸಂದರ್ಭದಲ್ಲಿ ಬರ ಘೋಫಿಣೆಯೊಂದೇ ಸರ್ಕಾರದ ಸಾಧನೆ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಜನರು ಪಕ್ಷಗಳ ದುರಾಡಳಿತ ಅರಿಯಬೇಕು. ಭಾವನಾತ್ಮಕತೆಗೆ ಒಳಗಾಗದೆ ಬುದ್ಧಿ ಕಲಿಸಬೇಕು. ಬಂಡವಾಳಶಾಹಿ ಪರ ನೀತಿಗಳನ್ನು ತಿರಸ್ಕರಿಸಬೇಕು. ದುಡಿಯುವ ಜನರು, ರೈತರು, ಕೂಲಿಕಾರ್ಮಿಕರು, ವಿದ್ಯಾರ್ಥಿ-ಗಳು ನಮ್ಮ ಸಹಿ ಸಂಗ್ರಹ ಜನಾಂದೋಲನದಲ್ಲಿ ಭಾಗಿಯಾಗಬೇಕು ಎಂದರು.
ಎಸ್ಯುಸಿಐ ಸಂಚಾಲಕ ಶರಣು ಗಡ್ಡಿ ಮಾತನಾಡಿದರು. ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಸಹಿ ಹಾಕಿ ಬೆಂಬಲಿಸಿದರು. ಬೆಂಬಲಿಗರಾದ ಸಿದ್ದಲಿಂಗ ರೆಡ್ಡಿ ರಮೇಶ್ ವಂಕಲಕುಂಟಿ, ಶರಣು ಪಾಟೀಲ್, ಗಂಗರಾಜು ಆಳ್ಳಳ್ಳಿ, ದೇವರಾಜ್ ಹೊಸಮನಿ, ಮಲ್ಲಪ್ಪ ಮಾದಿನೂರು, ಶಾರದಾ ಗಡ್ಡಿ ಇತರರಿದ್ದರು.