ಕೊಪ್ಪಳ: ತಾಲೂಕಿನ ಗೊಂಡಬಾಳ&ಮುದ್ದಾಬಳ್ಳಿ ಗ್ರಾಮಗಳ ನಡುವೆ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಯೋಜಿಸಿದ್ದು, ಇದಕ್ಕೆ ಎರಡೂ ಗ್ರಾಮಸ್ಥರ ವಿರೋಧವಿದೆ ಎಂದು ಮುದ್ದಾಬಳ್ಳಿ ಗ್ರಾಮಸ್ಥ ಗವಿಸಿದ್ದನಗೌಡ ಪಾಟೀಲ್ ತಿಳಿಸಿದರು.
ಕಳೆದೆರೆಡು ವರ್ಷದಿಂದ ಕಾರ್ಖಾನೆ ಆರಂಭ ಯತ್ನ ನಡೆದಿವೆ. ಬೆಳಗಾವಿ ಮೂಲದ ಯುಕೆಇಎಂ ಇನ್್ರಾ ಲಿಮಿಟೆಡ್ ಕಂಪನಿ ಖಾಸಗಿಯಾಗಿ 70 ಎಕರೆ ಜಮೀನು ಖರೀದಿಸಿದೆ. ಆರಂಭದಲ್ಲಿ ಯಾವ ಉದ್ದೇಶಕ್ಕೆಂದು ತಿಳಿಸಿಲ್ಲ. ಸಾರ್ವಜನಿಕ ಸಭೆ ಕರೆದಾಗ ನಾವೆಲ್ಲ ವಿರೋಧ ವ್ಯಕ್ತಪಡಿಸಿದ್ದೇವೆ. ಪರಿಸರ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದೇವೆ. ಆದರೆ, ಅಧಿಕಾರಿಗಳು ಕಂಪನಿಗೆ ನಿರಪೇಕ್ಷಣಾ ಪತ್ರ ನೀಡಿ ಪಕ್ಷಪಾತಿ ನಡೆ ಅನುಸರಿಸಿದ್ದಾರೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಈಗಲೂ ಕಾರ್ಖಾನೆ ನಿರ್ಮಾಣಕ್ಕೆ ನಮ್ಮ ವಿರೋಧವಿದೆ. ಅಧಿಕಾರಿಗಳು ಜನರ ಹಿತ ಕಾಯುವ ಬದಲು ಕಂಪನಿ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಗವಿಶ್ರೀಗಳು ಬಲ್ಡೋಟಾ, ಗೊಂಡಬಾಳ ಸಕ್ಕರೆ ಕಾರ್ಖಾನೆ ಸೇರಿದಂತೆ ಯಾವೊಂದು ಹೊಸ ಕಾರ್ಖಾನೆಗಳ ನಿರ್ಮಾಣ ಬೇಡ. ಅದರ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದು ನಮ್ಮ ಹೋರಾಟಕ್ಕೆ ಬಲ ಬಂದಂತಾಗಿದೆ ಎಂದರು. ಗ್ರಾಮಸ್ಥರಾದ ಡಾ.ಮಂಜುನಾಥ ಸಜ್ಜನ, ದತ್ತು ಕಮ್ಮಾರ, ರಾಜೀವರಡ್ಡಿ ಮಾದಿನೂರು ಇದ್ದರು.