

ಕೊಪ್ಪಳ: ರಾಜ್ಯ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿ ಮಾಡುವಂತೆ ಒತ್ತಾಯಿಸಿ ಉದ್ಯೋಗಾಕಾಂಗಳು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ರಾಜ್ಯ, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ಕೌಶಲ ಕೊರತೆ, ಜನಸಂಖ್ಯೆ ಇದಕ್ಕೆ ಕಾರಣವಲ್ಲ. ಸರ್ಕಾರಗಳೇ ಇದಕ್ಕೆ ನೇರ ಹೊಣೆ. ಕೆಲಸವಿಲ್ಲದೇ ಯುವಕರು ಅಪರಾಧ ಕೃತ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ನಮಗೆ ಬೇರೆ ಗ್ಯಾರಂಟಿಗಳಿಗಿಂತ ಉದ್ಯೋಗ ಗ್ಯಾರಂಟಿ ಅವಶ್ಯವಿದೆ. ಅದನ್ನು ನೀಡದ ಹೊರತು ಅಭಿವೃದ್ಧಿ ಸಾಧ್ಯವಿಲ್ಲ. ಚುನಾವಣೆ ಸಮಯದಲ್ಲಿ ಪೊಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದು ಉದ್ಯೋಗ ನೀಡದ ಸರ್ಕಾರಗಳಿಗೆ ನಾಚಿಕೆ ಆಗಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ, ಕೇಂದ್ರ ಸರ್ಕಾರದ ಇಲಾಖೆಗಳಲ್ಲಿನ ಖಾಲಿ ಹುದ್ದೆ ಭರ್ತಿ ಮಾಡಿ. ನೇಮಕಾತಿಗಳಲ್ಲಿನ ಅಕ್ರಮ ತಡೆದು ಪಾರದರ್ಶಕತೆ ಕಾಯ್ದುಕೊಳ್ಳಬೇಕು. ನಾಲ್ಕು ವರ್ಷದಿಂದ ನೇಮಕಾತಿ ನಡೆಯದ ಕಾರಣ ವಯೋಮಿತಿ ಸಡಿಲಿಸಿ. ದಿನಗೂಲಿ, ಹೊರ, ಒಳ ಗುತ್ತಿಗೆ ಕೈ ಬಿಟ್ಟು ಎಲ್ಲ ಹುದ್ದೆಗಳನ್ನು ಭರ್ತಿ ಮಾಡಿ. ಕೆಇಎ ನಿಗದಿಪಡಿಸಿದ ದುಬಾರಿ ಶುಲ್ಕ ಮರು ಪರಿಷ್ಕರಣೆ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆ ಬಳಿಕ ಡಿಯುಡಿಸಿ ಪಿಡಿ ಮಂಜುನಾಥ ಗುಂಡೂರು ಮನವಿ ಸ್ವೀಕರಿಸಿದರು.
ಉದ್ಯೋಗಾಕಾಂಗಳಾದ ಸುಭಾನ್ ನೀರಲಗಿ, ಶರಣು ಲಿಂಗದಳ್ಳಿ, ಮಹಾದೇವ, ಬಸವರಾಜ ತಾವರಗೇರಾ, ಶರಣು ಆಗೋಲಿ, ಶಿವಕುಮಾರ್ ಕಂಚಿ, ನಾಗರಾಜ ವಿಠಲಾಪುರ, ಹೊನ್ನೂರ್ ಬೋಚನಹಳ್ಳಿ, ಪ್ರದಿಪ್ ಮಾದಿನೂರು, ಮಾರುತಿ ನಾಗೇಶನ ಹಳ್ಳಿ, ಮೌನೇಶ್ ಮಂಗಳೂರು, ಯಮನೂರ ಚಳ್ಳಾರಿ ಇತರರಿದ್ದರು.