

ಕೊಪ್ಪಳ: ಜಿಲ್ಲಾ ಬ್ಯಾಡ್ಮಿಂಟನ್ ಅಸೋಸೀಯೇಷನ್ ಹಾಗೂ ಬ್ಲೂಸ್ಟಾರ್ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸಹಯೋಗದಲ್ಲಿ ನಗರದ ತಾಲೂಕು ಕ್ರೀಡಾಂಗಣದಲ್ಲಿ ಮೇ 25 ಮತ್ತು 26ರಂದು ಎರಡು ದಿನ ರಾಜ್ಯಮಟ್ಟದ ಪುರುಷರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಆಯೋಜಕ ಐ.ಎಸ್.ಬೊಮ್ಮನಾಳ ತಿಳಿಸಿದರು.
ಕಳೆದ 40 ವರ್ಷದಿಂದ ನಮ್ಮ ಅಸೋಸಿಯೇಷನ್ ಸಕ್ರಿಯವಾಗಿದೆ. 1980ರಲ್ಲಿ ಮೊದಲ ಬಾರಿ ರಾಜ್ಯಮಟ್ಟದ ಪಂದ್ಯಾವಳಿ ಆಯೋಜಿಸಲಾಗಿತ್ತು. ಬಳಿಕ 1992, 2000, 2007ರಲ್ಲಿ ನಡೆಸಿದ್ದೇವೆ. ಈಗ ಐದನೇ ಬಾರಿ ಆಹ್ವಾನಿತ ರಾಜ್ಯಮಟ್ಟದ ಪಂದ್ಯಾವಳಿ ಹಮ್ಮಿಕೊಂಡಿದ್ದೇವೆ. ಹಾಸನ, ಬೆಂಗಳೂರು, ದಾವಣಗೆರೆ ಸೇರಿ ವಿವಿಧ ಜಿಲ್ಲೆಗಳ 18 ತಂಡಗಳು ನೋಂದಾಯಿಸಿಕೊಂಡಿವೆ. ಕೊಪ್ಪಳ, ಭಾಗ್ಯನಗರ, ಗಂಗಾವತಿ ತಂಡಗಳು ಭಾಗವಹಿಸಲಿವೆ. ಒಂದೊಂದು ತಂಡದಲ್ಲಿ ರಾಷ್ಟ್ರಮಟ್ಟದ ಇಬ್ಬರು ಆಟಗಾರರಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮೇ 25ರಂದು ಉದ್ಘಾಟನಾ ಕಾರ್ಯಕ್ರಮ ಇರಲಿದೆ. ಶಾಸಕ ರಾವೇಂದ್ರ ಹಿಟ್ನಾಳ, ವಾಣಿಜ್ಯೋದ್ಯಮಿ ಶ್ರೀನಿವಾಸ ಗುಪ್ತಾ, ರಾಜ್ಯ ಬಾಲ್ ಬ್ಯಾಡ್ಮಿಂಟನ್ ಅಸೋಷಿಯೇಷನ್ ಅಧ್ಯಕ್ಷ ರಾವೇಂದ್ರ ಪ್ರಸಾದ, ಜಿಲ್ಲಾ ಅಸೋಸಿಯೇಷನ್ ಅಧ್ಯಕ್ಷ ಪ್ರಕಾಶ ಹೆಬ್ಬಾಳ ಸೇರಿ ಇತರರು ಭಾಗಿಯಾಗುವರು. ಆಗಮಿಸುವ ತಂಡಗಳಿಗೆ ಒಂದು ಸಾವಿರ ರೂ. ಪ್ರವೇಶ ಶುಲ್ಕ ಇರಲಿದೆ. ವಸತಿ, ಊಟ ಉಚಿತ ನೀಡಲಾಗುವುದು. ಪ್ರಥಮ ಬಹುಮಾನ 25 ಸಾವಿರ ರೂ., ದ್ವೀತಿಯ 20 ಸಾವಿರ, ತೃತೀಯ 15 ಸಾವಿರ ಹಾಗೂ ನಾಲ್ಕನೇ ಬಹುಮಾನವಾಗಿ 10 ಸಾವಿರ ರೂ. ನಗದು ಜತೆಗೆ ಟ್ರೋಪಿ ಪ್ರದಾನ ಮಾಡಲಾಗುವುದು ಎಂದರು.
ಮಾಹಿತಿಗೆ 99002,88805, 9845863018, 9880464780, 9164024477 ಸಂಖ್ಯೆ ಸಂಪರ್ಕಿಸಬಹುದೆಂದು ವಿವರಿಸಿದರು. ಅಸೋಸಿಯೇಷನ್ ಪದಾಧಿಕಾರಿಗಳಾದ ಸಿದ್ದು ಬುಳ್ಳಾ, ಗ್ಯಾನಚಂದ ಜಾಂಗಡಾ, ಗವಿ ಬಿನ್ನಾಳ ಇತರರಿದ್ದರು.